ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಗೆಲುವು ಸಾಧಿಸಿದೆ.
ಆ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ. ಸ್ಥಳೀಯ ವಾಹಿನಿಗಳು ವರದಿ ಮಾಡಿರುವಂತೆ, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಲ್ಲಿ ಪಿಟಿಐ ಪಕ್ಷವು 23 ಸ್ಥಾನಗಳನ್ನು ಗೆದ್ದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 6 ಸ್ಥಾನಗಳಲ್ಲಿ ತನ್ನದಾಗಿಸಿಕೊಂಡಿದೆ. ಮುಸ್ಲಿಂ ಕಾನ್ಫರೆನ್ಸ್ (ಎಂಸಿ), ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಪಾರ್ಟಿ(ಜೆಕೆಪಿಪಿ) ತಲಾ ಒಂದು ಸ್ಥಾನವನ್ನು ಗೆದ್ದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐಯು ಯಾವುದೇ ಪಕ್ಷದ ಬೆಂಬಲವಿಲ್ಲದೇ ಸರಳ ಬಹುಮತವನ್ನು ಗಳಿಸಿದೆ. ಇದೇ ಮೊದಲ ಬಾರಿ ಪಕ್ಷವು ಇಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಲಾಗಿದೆ.
ಈ ಚುನಾವಣೆಯಲ್ಲಿ ವಂಚನೆ ನಡೆದಿದೆ. ಇದಕ್ಕೆ ಸಾಕ್ಷ್ಯಾಧಾರಗಳು ಇವೆ ಎಂದು ಪಿಪಿಯು ಉಪಾಧ್ಯಕ್ಷೆ ಶೆರಿ ರೆಹಮಾನ್ ದೂರಿದ್ದಾರೆ. ಮತದಾನದ ವೇಳೆ ಪಿಟಿಐ ಕಾರ್ಯಕರ್ತರು ಪಿಪಿಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿ ದ್ದಾರೆ. ಹಲವಾರು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದವು ಎಂದು ಹೇಳಿದ್ದಾರೆ.