ಇಸ್ಲಾಮಾಬಾದ್: ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ 12 ಪ್ರಕರಣಗಳಲ್ಲಿ ಜೈಲು ಪಾಲಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ಪಾಕಿಸ್ತಾನ ಸೇನೆ ಮತ್ತು ಆರ್ಮಿ ಮ್ಯೂಸಿಯಂ ದಾಳಿ ಸೇರಿದಂತೆ ಎಲ್ಲಾ 12 ಪ್ರಕರಣಗಳಲ್ಲಿ ಎಟಿಸಿ ನ್ಯಾಯಾಧೀಶ ಮಲಿಕ್ ಎಜಾಜ್ ಆಸಿಫ್ ಅವರು ಖಾನ್‌ಗೆ ಜಾಮೀನು ನೀಡಿ ಆದೇಶಿಸಿದ್ದಾರೆ. ₹0.1 ಮಿಲಿಯನ್ ಬಾಂಡ್‌ನೊಂದಿಗೆ ಜಾಮೀನು ನೀಡಲಾಗಿದೆ.
ಮೇ 9ರ ದಾಳಿ ಪ್ರಕರಣಗಳಲ್ಲಿ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಇರುವುದರಿಂದ ಖಾನ್ ಅವರನ್ನು ಬಂಧಿಸಲು ಯಾವುದೇ ಸಮರ್ಥನೆ ಇಲ್ಲ . ಆದರೆ ಖಾನ್ ಅವರು ಇತರ ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿರುವುದರಿಂದ ಜೈಲಿನಲ್ಲೇ ಇರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಖಾನ್ ಅವರ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸುಮಾರು 100 ಸ್ಥಾನಗಳನ್ನು ಗೆದ್ದ ಒಂದು ದಿನದ ನಂತರ ನ್ಯಾಯಾಲಯ ದಿಂದ ಈ ಆದೇಶ ಬಂದಿದೆ.