ಕಾಬೂಲ್: ಗಲಭೆ ಪೀಡಿತ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳಿ ಕರೆತರಲಾಗಿದೆ.
ಇಂಡೋ-ಟಿಬೆಟನ್ ಗಡಿ ಪೊಲೀಸ್ ಸಿಬ್ಬಂದಿ, ಮಾಧ್ಯಮದ ನಾಲ್ವರು ಮಂದಿ ಸೇರಿ ಒಟ್ಟಾರೆ 140 ಮಂದಿ ಭಾರತೀಯ ಸಶಸ್ತ್ರ ಪಡೆಗಳ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಕಾಬೂಲ್‌ನಿಂದ ಹೊರಟಿದ್ದಾರೆ.
ಸೋಮವಾರ ಸಿ-17 ವಿಮಾನದಲ್ಲಿ ಭಾರತದ 40 ಅಧಿಕಾರಿಗಳನ್ನು ಮರಳಿ ಕರೆತರಲಾಗಿತ್ತು. ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ನೇತೃತ್ವದಲ್ಲಿ ತಾಲಿಬಾನೀ ಪಡೆಗಳೊಂದಿಗೆ ಸಂವಹನ ನಡೆಸಿದ 140 ಸಿಬ್ಬಂದಿಯ ತಂಡ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ರಾತ್ರಿ ಕಳೆದಿದೆ.
ಕಾಬೂಲ್‌ನಲ್ಲಿ 140 ಮಂದಿಯನ್ನು ಹೊತ್ತೊಯ್ದ ಸಿ-17 ವಿಮಾನವು ಸಾಧ್ಯವಾದಷ್ಟು ಅಫ್ಘನ್ ನೆತ್ತಿಯ ಮೇಲೆ ಹಾರಾಟ ಕಡಿಮೆ ಮಾಡಲೆಂದು ಪಕ್ಕದ ಇರಾನ್ ಮೇಲೆ ಹಾರಿ ಅರಬ್ಬೀ ಸಮುದ್ರ ದಾಟಿ, ಗುಜರಾತ್ ಮೂಲಕ ಭಾರತಕ್ಕೆ ಬಂದಿದೆ.
ಈ ಮೂಲಕ ಅಫ್ಘಾನಿಸ್ತಾನದಲ್ಲಿದ್ದ ಭಾರತದ ಎಲ್ಲಾ ರಾಯಭಾರ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಜಲಾಲಾಬಾದ್ ಮತ್ತು ಹೇರತ್‌ನಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ಕಳೆದ ವರ್ಷ ಮುಚ್ಚಿದ್ದ ಭಾರತ, ಕಳೆದ ತಿಂಗಳು ಕಂದಹಾರ್ ಮತ್ತು ಮಜ಼ರ್-ಎ-ಶರೀಫ್‌ನಲ್ಲಿರುವ ರಾಯಭಾರ ಕಾರ್ಯಾಲಯಗಳ ಚಟುವಟಿಕೆಗೆ ಅಂತ್ಯ ಹಾಡಿತ್ತು.