Wednesday, 11th December 2024

ಟೊರೊಂಟೋದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ

ಟೊರೊಂಟೋ: ಕೆನಡಾದ ಟೊರೊಂಟೋದಲ್ಲಿ ಗುಂಡಿನ ದಾಳಿಯಿಂದ ಗಂಭೀರ ವಾಗಿ ಗಾಯಗೊಂಡಿದ್ದ 21 ವರ್ಷದ ಭಾರತೀಯ ವಿದ್ಯಾರ್ಥಿ ಕಾರ್ತಿಕ್‌ ವಾಸುದೇವ್‌ ಮೃತಪಟ್ಟಿದ್ದಾರೆ. ಟೊರೊಂಟೋ ಸಬ್‌ ವೇನ ಪ್ರವೇಶದ್ವಾರದಲ್ಲೇ ಈ ಹತ್ಯೆ ನಡೆದಿದೆ.

ಹಂತಕರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಕೊಲೆ ಹಿಂದಿನ ಕಾರಣಗಳು ಪತ್ತೆಯಾಗಿಲ್ಲ. ಭಾರತೀಯ ವಿದ್ಯಾರ್ಥಿಯನ್ನು ಹತ್ಯೆ ಗೈದಿರುವುದು ಅತ್ಯಂತ ಆಘಾತಕಾರಿ ಮತ್ತು ದುರದೃಷ್ಟಕರವೆಂದು ಟೊರೊಂಟೋದಲ್ಲಿರುವ ಭಾರತದ ಕಾನ್ಸುಲೇಟ್‌ ಅಧಿಕಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್‌ ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಟೊರೊಂಟೊದಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆಗೆ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುರಂತ ಘಟನೆಯಿಂದ ದುಃಖಿತನಾಗಿದ್ದೇನೆ ಎಂದು ಟ್ವೀಟ್‌ ಮಾಡಿರುವ ಅವರು, ಕಾರ್ತಿಕ್‌ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.