ಲಂಡನ್: ಇತ್ತೀಚೆಗೆ ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಕೊಲೆ(Indian woman Murder)ಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದ ಬಗ್ಗೆ ಸ್ಫೋಟಕ ಸಂಗತಿ ಹೊರಬಿದ್ದಿದೆ. ತಾನು ಕೊಲೆಯಾಗುವುದಕ್ಕಿಂತ ಕೆಲವೇ ದಿನಗಳ ಹಿಂದೆ ತನ್ನ ಪತಿಯ ನಡವಳಿಕೆ ಬಗ್ಗೆ ಹರ್ಷಿತಾ ಬ್ರೆಲ್ಲಾ ತಾಯಿ ಜೊತೆ ಹಂಚಿಕೊಂಡಿದ್ದಳು ಎಂಬ ವಿಚಾರ ಇದೀಗ ತಿಳಿದುಬಂದಿದೆ. ತನ್ನ ಪತಿ ಪಂಕಜ್ ಲಂಬಾ ತನ್ನನ್ನು ಕೊಲೆ ಮಾಡುತ್ತಾನೆ ಎಂದು ಹರ್ಷಿತಾ ತನ್ನ ತಾಯಿಗೆ ಹೇಳಿದ್ದಳಂತೆ.
ಈ ಬಗ್ಗೆ ಹರ್ಷಿತಾ ತಾಯಿ ಸುದೇಶ್ ಕುಮಾರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಅವಳು ಸಾಯುವ ಕೆಲವೇ ವಾರಗಳ ಮೊದಲು ನನ್ನ ಮಗಳೊಂದಿಗೆ ಮಾತನಾಡಿದ್ದಳು. ಲಂಬಾ ತನ್ನ ಜೀವನವನ್ನು ಹಾಳುಮಾಡಿದ್ದಾನೆ ಎಂದು ಹೇಳುತ್ತಲೇ ಇದ್ದಳು. ನಾನು ಅವನ ಬಳಿಗೆ ಹಿಂತಿರುಗುವುದಿಲ್ಲ. ಅವನು ನನ್ನನ್ನು ಕೊಲ್ಲುತ್ತಾನೆ” ಎಂದು ಆಕೆ ನನ್ನ ಬಳಿ ಹೇಳಿಕೊಂಡಿದ್ದಳು ಎಂದು ತಾಯಿ ಕಣ್ಣೀರಿಟ್ಟಿದ್ದಾಳೆ.
ನನ್ನ ಮಗಳು ತುಂಬಾ ಸರಳ, ತುಂಬಾ ಮುಗ್ಧ. ಅವಳು ಜನರೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಳು. ಇದೀಗ ತಲೆಮರೆಸಿಕೊಂಡಿರುವ ಲಂಬಾ ದೆಹಲಿಯಲ್ಲಿದ್ದಾನೆಂದು ಎಷ್ಟೇ ಬಾರಿ ಹೇಳಿದರೂ ಪೊಲೀಸರು ತಮ್ಮ ಮಾತನ್ನು ನಂಬುತ್ತಲೇ ಇಲ್ಲ ಎಂದು ಅವರು ದೂರಿದ್ದಾರೆ. ಇನ್ನು ಇದೇ ವೇಳೆ ಹರ್ಷಿತಾಳ ತಂದೆ ಮಾತನಾಡಿ, ಆಕೆಯ ಸಾವಿನ ನಂತರ ಅವರ ಕುಟುಂಬವು ನರಳುತ್ತಿದೆ. ಆಕೆಯ ಸಾವಿಗೆ ನ್ಯಾಯ ಸಿಗಲೇಬೇಕು. ನಾನು ಅವಳಿಗೆ ಹೇಳುತ್ತಿದ್ದೆ, ನಾನು ಸತ್ತಾಗ ನನ್ನ ಅಂತಿಮ ವಿಧಿಗಳನ್ನು ನೀವು ಮಾಡಬೇಕೆಂದು ನಾನು ಬಯಸುತ್ತೇನೆ. ನಾನು ಅವಳ ಅಂತ್ಯ ಸಂಸ್ಕಾರ ಮಾಡಬೇಕಾದ ಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ ಎಂದು ಹೇಳಿದರು.
ಪೂರ್ವ ಲಂಡನ್ನಲ್ಲಿ ಬಿಟ್ಟು ಹೋಗಿದ್ದ ಕಾರಿನ ಬೂಟಿನಲ್ಲಿ ಹರ್ಷಿತಾ ಬ್ರೆಲ್ಲಾ ಅವರ ಮೃತದೇಹ ಪತ್ತೆಯಾಗಿದ್ದು, ಅವರ ಪತಿ ಪಂಕಜ್ ಲಂಬಾ ಅವರೇ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪತಿ ಪಂಕಜ್ ಲಂಬಾ ದೇಶ ಬಿಟ್ಟು ಪರಾರಿಯಾಗಿರಬಹುದು ಎಂದು ಬ್ರಿಟನ್ ಪೊಲೀಸರು ಶಂಕಿಸಿದ್ದಾರೆ. ಮೃತ ಹರ್ಷಿತಾ ಅವರ ಪತಿ ಪಂಕಜ್ ಲಂಬಾ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಈ ಪ್ರಕರಣದಲ್ಲಿ 60ಕ್ಕೂ ಹೆಚ್ಚು ಪತ್ತೇದಾರರು ಕೆಲಸ ಮಾಡುತ್ತಿದ್ದಾರೆ ಎಂದು ನಾರ್ಥಂಪ್ಟನ್ಶೈರ್ ಪೊಲೀಸ್ ವಿಭಾಗದ ಮುಖ್ಯ ಇನ್ಸ್ಪೆಕ್ಟರ್ ಪೌಲ್ ಕ್ಯಾಶ್ ತಿಳಿಸಿದ್ದಾರೆ. ಆರೋಪಿ ಕುರಿತು ಯಾವುದೇ ಸುಳಿವು ಇದ್ದರೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Keerthy Suresh : ಕೀರ್ತಿ ಸುರೇಶ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್ , ಗೋವಾದಲ್ಲಿ ನಡೆಯಲಿದೆ ಅದ್ಧೂರಿ ಮದುವೆ!