Sunday, 15th December 2024

ಟೆಕ್ಸಾಸ್‌ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರ ಸಾವು

ನ್ಯೂಯಾರ್ಕ್​​: ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ.

ಮೃತರೆಲ್ಲರು ಒಂದೇ ಕುಟುಂಬದವರು. ಅರವಿಂದ್ ಮಣಿ (45), ಅವರ ಪತ್ನಿ ಪ್ರದೀಪಾ ಅರವಿಂದ್ (40) ಮತ್ತು ಮಗಳು ಆಂಡ್ರಿಲ್ ಅರವಿಂದ್ (17) ಮೃತಪಟ್ಟಿದ್ದಾರೆ. ಮಗ ಆದಿರ್ಯಾನ್​ ಅಪಘಾತದಿಂದ ಪಾರಾಗಿದ್ದು, ಕುಟುಂಬವನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಲಾಂಪಾಸ್​ ಕೌಂಟಿಯಲ್ಲಿ ಈ ದುರ್ಘಟನೆ ನಡೆದಿದೆ. ಅರವಿಂದ್ ಮತ್ತು ಅವರ ಪತ್ನಿ ಉತ್ತರ ಟೆಕ್ಸಾಸ್‌ನಲ್ಲಿರುವ ತಮ್ಮ ಮಗಳನ್ನು ಕಾಲೇಜಿಗೆ ಕರೆದುಕೊಂಡು ಹೋಗುತ್ತಿದ್ದರು. 17 ವರ್ಷದ ಆಂಡ್ರಿಲ್, ಪ್ರೌಢಶಾಲೆ ಮುಗಿಸಿದ್ದು, ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕೆ ಪಡೆಯಲು ಪಾಲಕ ರೊಂದಿಗೆ ಹೋಗುತ್ತಿದ್ದಳು. ಆಕೆ ಕಂಪ್ಯೂಟರ್ ವಿಜ್ಞಾನ ಅಧ್ಯಯನ ಮಾಡಲು ಯೋಜಿಸಿದ್ದಳು. ಆದರೆ, ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಸದ್ಯ ಅನಾಥವಾಗಿರುವ ಆದಿರ್ಯಾನ್ ಜೀವನಕ್ಕೆ ನೆರವು ನೀಡಲು ಎ ಗೋ ಫಂಡ್​ ಮೀ ಪೇಜ್​ ಅಭಿಯಾನ ಶುರು ಮಾಡಿದ್ದು, ಈವರೆಗೆ 7 ಲಕ್ಷ ಡಾಲರ್​ ಸಂಗ್ರಹವಾಗಿದೆ.

ಅಪಘಾತದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಕಾರಿನಲ್ಲಿ ಮೂವರು ಪ್ರಯಾಣಿಸು ತ್ತಿದ್ದಾಗ ಕಾರಿನ ಟೈರ್ ಸ್ಫೋಟಗೊಂಡಿದೆ. ಇದರಿಂದ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.