Sunday, 15th December 2024

Israel Airstrike: ನಸ್ರಲ್ಲಾ ಹತ್ಯೆಯಿಂದ ದಿಕ್ಕೆಟ್ಟಿರುವ ಹೆಜ್ಬುಲ್ಲಾಗಳಿಗೆ ಶಾಕ್‌ ಮೇಲೆ ಶಾಕ್‌- ಮತ್ತೆ ಏರ್‌ಸ್ಟ್ರೈಕ್‌; 100ಕ್ಕೂ ಅಧಿಕ ಮಂದಿ ಬಲಿ

Israel strikes

ಬೈರುತ್‌: ಹೆಜ್ಬುಲ್ಲಾ(Hezbollah) ನಾಯಕ ಹಸನ್‌ ನಸ್ರಲ್ಲಾ(Hassan Nasrallah) ಹೊಡೆದುರುಳಿಸಿದ ಬೆನ್ನಲ್ಲೇ ಇಸ್ರೇಲ್‌ ಸೇನೆ(Israel Airstrike) ಮತ್ತೆ ಲೆಬನಾನ್‌ ಮೇಲೆ ವೈಮಾನಿಕ ದಾಳಿ ನಡೆಸಿದೆ. ಭೀಕರ ದಾಳಿಯಲ್ಲಿ100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಲೆಕ್ಕವಿಲ್ಲದಷ್ಟು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಮೂಲಕ ಇಸ್ರೇಲ್‌ ದಾಳಿಗೆ ಇದುವರೆಗೆ 1,000 ಜನ ಬಲಿಯಾಗಿದ್ದು, 6,000 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಲೆಬನಾನ್‌ನ ಆರೋಗ್ಯ ಸಚಿವಾಲಯವು ದಕ್ಷಿಣದ ಪ್ರಮುಖ ನಗರವಾದ ಸಿಡಾನ್ ಬಳಿ ಮಾರಣಾಂತಿಕ ವಾಯುದಾಳಿಗಳು ಭಾನುವಾರ ನಡೆದಿವೆ ಎಂದು ಹೇಳಿದೆ. ಈ ದಾಳಿಯಲ್ಲಿ ಫ್ರೆಂಚ್ ಪ್ರಜೆ ಕೂಡ ಸಾವನ್ನಪ್ಪಿದ್ದಾನೆ ಎಂದು ಫ್ರಾನ್ಸ್‌ನ ವಿದೇಶಾಂಗ ಸಚಿವಾಲಯವು ದೃಢಪಡಿಸಿದೆ. ಇದರ ನಡುವೆ ಫ್ರೆಂಚ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೊಟ್ ಲೆಬನಾನ್‌ಗೆ ಆಗಮಿಸಿದ್ದಾರೆ. ಇದರ ಬೆನ್ನಲ್ಲೇ ಫ್ರೆಂಚ್‌ ಪ್ರಜೆ ಹತ್ಯೆ ಬಗ್ಗೆ ಸುದ್ದಿ ಹೊರಬಿದ್ದಿದೆ ಎನ್ನಲಾಗಿದೆ.

ಇನ್ನು ನಿನ್ನೆಯಷ್ಟೇ ಇಸ್ರೇಲ್‌ ಹೆಜ್ಬುಲ್ಲಾಗಳ ಜತೆ ಜತೆಗೆ ಹೌತಿ ಉಗ್ರರನ್ನು ಮಟ್ಟ ಹಾಕುವ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಕೇಂದ್ರಗಳು ಮತ್ತು ಬಂದರು ಸೇರಿದಂತೆ ಯೆಮೆನ್‌ನ ಹಲವಾರು ಹೌತಿ ಬಂಡುಕೋರರ ನೆಲೆಗಳ ಮೇಲೆ ಹಲವಾರು ವಿಮಾನಗಳನ್ನು ಬಳಸಿ ದಾಳಿ ನಡೆಸುತ್ತಿದ್ದೇವೆ (Israel Strikes Houthi) ಎಂದು ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ. ಇರಾನ್ ಬೆಂಬಲಿತ ಬಂಡುಕೋರ ಗುಂಪು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣವನ್ನು ಕ್ಷಿಪಣಿಯಿಂದ ಗುರಿಯಾಗಿಸಿಕೊಂಡಿತ್ತು. ಅದಾಗಿ ಒಂದು ದಿನದ ನಂತರ ಪ್ರತಿ ದಾಳಿಗಳು ನಡೆದಿವೆ.

ಇಂದು ನಡೆದ ದೊಡ್ಡ ಪ್ರಮಾಣದ ಕಾರ್ಯಾಚರಣೆಯಲ್ಲಿ, ಫೈಟರ್ ಜೆಟ್‌ಗಳು , ಇಂಧನ ತುಂಬುವ ವಿಮಾನಗಳು ಮತ್ತು ಬೇಹುಗಾರಿಕೆ ವಿಮಾನಗಳು ಸೇರಿದಂತೆ ಹಲವಾರು ವಾಯುಪಡೆಯ ವಿಮಾನಗಳು ಯೆಮೆ ನ್‌ ರಾಸ್ ಇಸಾ ಮತ್ತು ಹೊಡೆಡಾ ಪ್ರದೇಶಗಳಲ್ಲಿ ಹೌತಿ ಭಯೋತ್ಪಾದಕರ ನೆಲೆಯ ಮೇಲೆ ದಾಳಿ ನಡೆಸಿವೆ” ಎಂದು ಮಿಲಿಟರಿ ವಕ್ತಾರ ಕ್ಯಾಪ್ಟನ್ ಡೇವಿಡ್ ಅವ್ರಹಾಮ್ ಹೇಳಿಕೆ ನೀಡಿದ್ದಾರೆ.

ಐಡಿಎಫ್ (ಮಿಲಿಟರಿ) ವಿದ್ಯುತ್ ಕೇಂದ್ರಗಳು ಮತ್ತು ತೈಲ ಆಮದಿಗೆ ಬಳಸುವ ಬಂದರುಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ಮಿಲಿಟರಿ ಹೇಳಿಕೆ ತಿಳಿಸಿದೆ. 2014ರಲ್ಲಿ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡಿದ್ದ ಹೌತಿಗಳು, ಶಸ್ತ್ರಾಸ್ತ್ರಗಳನ್ನು ಈ ಪ್ರದೇಶಕ್ಕೆ ವರ್ಗಾಯಿಸಲು ಮತ್ತು ಮಿಲಿಟರಿ ಅಗತ್ಯಗಳಿಗೆ ಸರಬರಾಜು ಮಾಡಲು ಬಳಸಿದ್ದ ಜಾಗಕ್ಕೆ ಭಾನುವಾದ ದಾಳಿ ನಡೆದಿದೆ.

ಈ ಸುದ್ದಿಯನ್ನೂ ಓದಿ: Explained on Hezbollah: ಲೆಬನಾನ್‌‌ನ ಉಗ್ರ ಸಂಘಟನೆ ಹೆಜ್ಬುಲ್ಲಾ ಹುಟ್ಟಿದ್ದು ಹೇಗೆ? ಇಸ್ರೇಲ್‌‌ಗೂ ಇದಕ್ಕೂ ಏಕಿಷ್ಟು ಸಂಘರ್ಷ?