Sunday, 15th December 2024

Israel Airstrike: ಒಂದಲ್ಲ… ಎರಡಲ್ಲ ಬರೋಬ್ಬರಿ 900 ಕೆ.ಜಿ ಬಾಂಬ್‌; ನಸ್ರಲ್ಲಾ ಹತ್ಯೆಗೆ ಇಸ್ರೇಲ್‌ ಮಾಡಿದ್ದು ಅಂತಿಂಥಾ ಪ್ಲ್ಯಾನ್‌ ಅಲ್ಲ!

israel airstrike

ಬೈರುತ್‌: ಹೆಜ್ಬುಲ್ಲಾ ಮುಖಂಡ ಹಸನ್‌ ನಸ್ರಲ್ಲಾ(Hassan Nasrallah) ಹತ್ಯೆಗಾಗಿ ಇಸ್ರೇಲ್‌ ಸೇನೆ(Israel Airstrike) ನಡೆಸಿದ ವೈಮಾನಿಕ ದಾಳಿಯಲ್ಲಿ ಬರೋಬ್ಬರಿ 900ಕೆ.ಜಿ ಬಂಕರ್-ಬಸ್ಟರ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ 2,000-lb ಬಾಂಬ್‌ಗಳನ್ನು ಬಳಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಸೆನೆಟ್‌ ಸಶಸ್ತ್ರ ಸೇವೆಗಳ ಏರ್‌ಲ್ಯಾಂಡ್ ಉಪಸಮಿತಿಯ ಅಧ್ಯಕ್ಷ ಮಾರ್ಕ್ ಕೆಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಹೆಜ್ಬುಲ್ಲಾಗಳನ್ನು ಮಟ್ಟ ಹಾಕಲು ಇಸ್ರೇಲ್‌ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿವೆ ಎಂದು ಹೇಳಿದ್ದಾರೆ. ಬಂಕರ್-ಬಸ್ಟರ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ 2,000-lb ಮಾರ್ಕ್ 84 ಸರಣಿಯ ಬಾಂಬ್‌ಗಳು ಕಳೆದ ವಾರ ಹೆಜ್ಬೊಲ್ಲಾಗಳ ಪ್ರಧಾನ ಕಛೇರಿಯನ್ನು ಧ್ವಂಸಗೊಳಿಸಿವೆ.

ಇಸ್ರೇಲ್‌ನ ದೀರ್ಘಾವಧಿಯ ಮಿತ್ರರಾಷ್ಟ್ರವಾದ ಅಮೆರಿಕ, ಅದರ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ರಾಷ್ಟ್ರವಾಗಿದೆ. ವಿಶೇಷವಾಗಿ ಇಸ್ರೇಲ್-ಹಮಾಸ್ ಯುದ್ಧವು ಅಕ್ಟೋಬರ್ 7 ರಂದು ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಇಸ್ರೇಲ್‌ಗೆ ನುಗ್ಗಿ ಸಾವಿರಾರು ಜನರನ್ನು ಕೊಂದ ನಂತರ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿವರೆಗೆ ಯಥೇಚ್ಛವಾದ ರೀತಿಯಲ್ಲಿ ಅಮೆರಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿವೆ.

ಒಂದೇ ವಾರದಲ್ಲಿ 7 ಹೆಜ್ಬುಲ್ಲಾ ಕಮಾಂಡರ್‌ಗಳ ಹತ್ಯೆ

ಪೇಜರ್‌ ಸ್ಫೋಟದ ಮೂಲಕ ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾಗಳನ್ನು ಗುರಿಯಾಗಿಸಿ ದಾಳಿ ಆರಂಭಿಸಿದ ಇಸ್ರೇಲ್‌, ವೈಮಾನಿಕ ದಾಳಿಯನ್ನೂ ಶುರುಮಾಡಿತ್ತು. ಹೀಗೆ ಕಳೆದೊಂದು ವಾರದಲ್ಲಿ ಇಸ್ರೇಲ್‌ ಸೇನೆ ದಾಳಿಯಲ್ಲಿ ಕನಿಷ್ಠ ಏಳು ಹೆಜ್ಬುಲ್ಲಾ ಕಮಾಂಡರ್‌ಗಳನ್ನು ಹೊಡೆದುರುಳಿಸಲಾಗಿದೆ. ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಸಾವನ್ನಪ್ಪಿದ ಒಂದು ದಿನದ ನಂತರ, ಹೆಜ್ಬುಲ್ಲಾದ ಸೆಂಟ್ರಲ್ ಕೌನ್ಸಿಲ್‌ನ ಉಪ ಮುಖ್ಯಸ್ಥ ನಬಿಲ್ ಕೌಕ್‌ನ ಹತ್ಯೆಯನ್ನು ದೃಢಪಡಿಸಿತು. ದಾಳಿಯಲ್ಲಿ ಮತ್ತೊಬ್ಬ ಹಿರಿಯ ಕಮಾಂಡರ್ ಅಲಿ ಕರಕಿ ಸಾವನ್ನಪ್ಪಿದ್ದಾನೆ ಎಂದು ಗುಂಪು ಹೇಳಿದೆ. ದಾಳಿಯಲ್ಲಿ ಮಡಿದ ಇತರ ಹಿಜ್ಬುಲ್ಲಾ ಕಮಾಂಡರ್ಗಳೆಂದರೆ ಇಬ್ರಾಹಿಂ ಅಕಿಲ್, ಅಹ್ಮದ್ ವೆಹ್ಬೆ, ಮೊಹಮ್ಮದ್ ಸುರೂರ್ ಮತ್ತು ಇಬ್ರಾಹಿಂ ಕೊಬೈಸ್ಸಿ.

ಏತನ್ಮಧ್ಯೆ, ಇಸ್ರೇಲ್ ಭಾನುವಾರ ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಗುರಿಗಳ ಮೇಲೆ ತನ್ನ ಬಾಂಬ್ ದಾಳಿಯನ್ನು ಮುಂದುವರೆಸಿತು, ಒಂದು ದಿನದಲ್ಲಿ 100 ಕ್ಕೂ ಹೆಚ್ಚು ಜನರನ್ನು ಕೊಂದಿತು. ಲೆಬನಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ದಾಳಿಯಲ್ಲಿ 105 ಜನರು ಸಾವನ್ನಪ್ಪಿದ್ದಾರೆ ಮತ್ತು 359 ಜನರು ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Explained on Hezbollah: ಲೆಬನಾನ್‌‌ನ ಉಗ್ರ ಸಂಘಟನೆ ಹೆಜ್ಬುಲ್ಲಾ ಹುಟ್ಟಿದ್ದು ಹೇಗೆ? ಇಸ್ರೇಲ್‌‌ಗೂ ಇದಕ್ಕೂ ಏಕಿಷ್ಟು ಸಂಘರ್ಷ?