Sunday, 6th October 2024

Israel Airstrike: ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದ ಗಾಜಾ ಮಸೀದಿ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; 18 ಜನ ಬಲಿ

Israel airstrike

ಬೈರುತ್‌: ಇಸ್ರೇಲ್‌ ಸೇನೆ(Israel Airstrike) ಗಾಜಾದ ಮೇಲೆ ಇಸ್ರೇಲಿ ಸೇನೆ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಪ್ಯಾಲೇಸ್ಟಿನಿಯನ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದು, ದೇರ್ ಅಲ್-ಬಾಲಾಹ್ ಪಟ್ಟಣದ ಅಲ್-ಅಕ್ಸಾ ಆಸ್ಪತ್ರೆಯ ಬಳಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡುತ್ತಿದ್ದ ಮಸೀದಿಯ ಮೇಲೆ ದಾಳ ಸಂಭವಿಸಿದೆ ಎಂದು ಹೇಳಿದೆ. ಘಟನೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಹಮಾಸ್-ನಿಯಂತ್ರಿತ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 2023 ರಿಂದ ಇಲ್ಲಿವರೆಗೆ ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ ಸಾವಿನಪ್ಪಿದವರ ಸಂಖ್ಯೆ ಸುಮಾರು 42,000 ಕ್ಕೆ ಏರಿದೆ. ಏತನ್ಮಧ್ಯೆ, ಉತ್ತರ ಲೆಬನಾನ್‌ನಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯು ಹಮಾಸ್ ಅಧಿಕಾರಿ ಸಯೀದ್ ಅತಲ್ಲಾ ಅಲಿ ಮತ್ತು ಆತನ ಕುಟುಂಬವನ್ನು ಕೊಂದಿದೆ ಎಂದು ಹಮಾಸ್ ಶನಿವಾರ ಹೇಳಿದೆ.

ಮತ್ತೊಂದೆಡೆ ಲೆಬನಾನ್‌ ಮೇಲೆ ಇಸ್ರೇಲಿ ಸೇನೆಯ ಭೀಕರ ದಾಳಿ(Israel Airstrike)ಗೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಖಂಡನೆ ವ್ಯಕ್ತಪಡಿಸಿದ್ದು, ಇಸ್ರೇಲ್‌ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ಕೆರಳಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು(Benjamin Netanyahu) ಮ್ಯಾಕ್ರನ್‌ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ರನ್, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿದೆ. ಯುದ್ಧವು ದ್ವೇಷಕ್ಕೆ ಕಾರಣವಾಗುತ್ತದೆ. ಹೀಗಾಗಿ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಿದ್ದೇವೆ. ಗಾಜಾದ ನಂತೆ ಇದೀಗ ಇಸ್ರೇಲ್‌ ಲೆಬನಾನ್‌ ಮೇಲೆ ದಾಳಿ ನಡೆಸುತ್ತಿರುವುದು ವಿಷಾದನೀಯ ಎಂದಿದ್ದಾರೆ.

ನೆತಾನ್ಯಾಹು ತಿರುಗೇಟು

ಇನ್ನು ಮ್ಯಾಕ್ರನ್‌ ಹೇಳಿಕೆಯಿಂದ ಕೆರಳಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಟಾಂಗ್‌ ಕೊಟ್ಟಿದ್ದಾರೆ. ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಮ್ಯಾಕ್ರನ್ ಕರೆ ನೀಡುತ್ತಿರುವುದು ನಾಚಿಕೆಗೇಡು ಎಂದು ಹೇಳಿದರು.
“ಇರಾನ್ ನೇತೃತ್ವದ ಅನಾಗರಿಕತೆಯ ಶಕ್ತಿಗಳ ವಿರುದ್ಧ ಇಸ್ರೇಲ್ ಹೋರಾಡುತ್ತಿರುವಾಗ, ಎಲ್ಲಾ ನಾಗರಿಕ ದೇಶಗಳು ಇಸ್ರೇಲ್‌ ಪರವಾಗಿ ದೃಢವಾಗಿ ನಿಲ್ಲಬೇಕು ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Israel Airstrike: ಇಸ್ರೇಲ್‌ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ? ಫ್ರಾನ್ಸ್‌ ಅಧ್ಯಕ್ಷನ ವಿರುದ್ಧ ನೆತನ್ಯಾಹು ಕೆಂಡಾಮಂಡಲ