ಬೆಂಗಳೂರು: ಭಯೋತ್ಪಾದಕ ಗುಂಪು ಹೆಜ್ಬುಲ್ಲಾದ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಗುರುವಾರ ಲೆಬನಾನ್‌ನ ಹಲವು ಕಡೆಗೆ ಪೂರ್ಣ ಪ್ರಮಾಣದ ದಾಳಿ (Israel Strikes Lebanon) ಪ್ರಾರಂಭಿಸಿದೆ. ಇತ್ತೀಚೆಗೆ ನಡೆದ ಪೇಜರ್ ಮತ್ತು ವಾಕಿಟಾಕಿ ದಾಳಿಗಳನ್ನು ಖಂಡಿಸಿ ಹಿಜ್ಬುಲ್ಲಾ ಮುಖ್ಯಸ್ಥ ದೂರದರ್ಶನದ ಮೂಲಕ ಭಾಷಣ ಮಾಡುತ್ತಿದ್ದಂತೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಈ ದಾಳಿಯನ್ನು ಪ್ರಾರಂಭಿಸಿತು.
“ಐಡಿಎಫ್ ಪ್ರಸ್ತುತ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಗುರಿಗಳ ಮೇಲೆ ದಾಳಿ ನಡೆಸಿ ಹಿಜ್ಬುಲ್ಲಾದ ಭಯೋತ್ಪಾದಕ ಸಾಮರ್ಥ್ಯ ಮತ್ತು ಮೂಲಸೌಕರ್ಯಗಳನ್ನು ಕುಗ್ಗಿಸುತ್ತಿದೆ. ದಶಕಗಳಿಂದ, ಹಿಜ್ಬುಲ್ಲಾ ಜನರ ಮನೆಗಳನ್ನೇ ಶಸ್ತ್ರಸಜ್ಜಿತಗೊಳಿಸಿಕೊಂಡಿದೆ. ಅವುಗಳ ಕೆಳಗೆ ಸುರಂಗಗಳನ್ನು ಅಗೆದಿದೆ ಮತ್ತು ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ. ಅಂತೆಯೇ ದಕ್ಷಿಣ ಲೆಬನಾನ್ ಅನ್ನು ಯುದ್ಧ ವಲಯವಾಗಿ ಪರಿವರ್ತಿಸಿಕೊಂಡಿದೆ ಎಂದು ಐಡಿಎಫ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಈ ವಾರದ ಆರಂಭದಲ್ಲಿ ಇರಾನ್ ಬೆಂಬಲಿತ ಲೆಬನಾನ್ ಗುರಿಯಾಗಿಸಿಕೊಂಡು ರೇಡಿಯೋಗಳು ಮತ್ತು ಪೇಜರ್‌ಗಳಲ್ಲಿ ಸ್ಫೋಟಗಳನ್ನು ಮಾಡಲಾಗಿತ್ತು. ಘಟನೆಯ ಬಳಿಕ ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಮೊದಲ ಬಾರಿಗೆ ಭಾಷಣ ಮಾಡುತ್ತಿದ್ದಾಗಲೇ ಇಸ್ರೇಲ್ ನೇರ ದಾಳಿ ಆರಂಭಿಸಿದೆ.
ಭಾಷಣ ನಡೆಯತ್ತಿದ್ದಂತೆ ಇಸ್ರೇಲ್‌ನ ಯುದ್ಧ ವಿಮಾನಗಳಿಂದ ಸೋನಿಕ್ ಬೂಮ್‌ಗಳನ್ನು ಎಬ್ಬಿಸಿ ಬೇರುತ್‌ನ ಕಟ್ಟಡಗಳ ಮೇಲೆ ದಾಳಿ ಮಾಡಲಾಗಿದೆ. ಆಗಾಗ್ಗೆ ಸಂಭವಿಸುವ ಸೋನಿಕ್ ಬೂಮ್‌ಗಳನ್ನು ಸೃಷ್ಟಿಸುವ ಮೂಲಕ ಯುದ್ಧದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ರಾತ್ರೋರಾತ್ರಿ, ದಕ್ಷಿಣ ಲೆಬನಾನ್ ವೈಮಾನಿಕ ದಾಳಿ ನಡೆಸುವುದನ್ನು ಇಸ್ರೇಲ್ ದೃಢಪಡಿಸಿದೆ. ಮಧ್ಯಾಹ್ನದ ವೇಳೆಗೆ, ಉದ್ವಿಗ್ನ ಗಡಿ ಪ್ರದೇಶದಲ್ಲಿ ಬಾಂಬ್ ದಾಳಿ ಪುನರಾರಂಭಗೊಂಡಿದೆ ಎಂದು ಹಿಜ್ಬುಲ್ಲಾ ವರದಿ ಮಾಡಿದೆ.
ಹಿಜ್ಬುಲ್ಲಾದ ಸಂವಹನ ಸಾಧನಗಳ ಮೇಲಿನ ದಾಳಿಯಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಸುಮಾರು 3,000 ಜನರು ಗಾಯಗೊಂಡಿದ್ದಾರೆ. ಇದು ಪೂರ್ಣ ಪ್ರಮಾಣದ ಯುದ್ಧ ಕಾಲವಾಗಿದೆ.
ಇದನ್ನೂ ಓದಿ: Israeli airstrike: ಗಾಜಾ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ 34 ಮಂದಿ ಮೃತ್ಯು
ಪೇಜರ್ ಮತ್ತು ವಾಕಿ-ಟಾಕಿ ದಾಳಿಗಳಲ್ಲಿ ಭಾಗಿಯಾಗಿರುವ ಬಗ್ಗೆ ಇಸ್ರೇಲ್ ಮೌನವಾಗಿತ್ತು. ಯಾವುದೇ ಜವಾಬ್ದಾರಿ ತೆಗೆದುಕೊಂಡಿಲ್ಲ. ಆದಾಗ್ಯೂ, ದೇಶದ ಗುಪ್ತಚರ ಸಂಸ್ಥೆ ಮೊಸ್ಸಾದ್ ಈ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದೆ ಎಂದು ಹಲವಾರು ಭದ್ರತಾ ಮೂಲಗಳು ಸೂಚಿಸಿವೆ.
ಇಸ್ರೇಲ್‌ಗೆ ಕಠಿಣ ಎಚ್ಚರಿಕೆ
ಭಾಷಣದಲ್ಲಿ, ಹೆಜ್ಬುಲ್ಲ ಆಧ್ಯಕ್ಷ ನಸ್ರಲ್ಲಾ ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಾಳಿಗಳನ್ನು “ಯುದ್ಧ ಘೋಷಣೆ” ಎಂದು ಕರೆಯಬಹುದು ಎಂದು ಹೇಳಿದ್ದಾರೆ. ಸಾವಿರಾರು ಪೇಜರ್‌ಗಳನ್ನು ಸ್ಫೋಟಿಸುವ ಮೂಲಕ ಇಸ್ರೇಲ್ ತನ್ನ ವ್ಯಾಪ್ತಿಯನ್ನು ಮೀರಿದೆ ಎಂದು ಹೇಳಿದೆ.
ಕಳೆದ ಅಕ್ಟೋಬರ್‌ನಲ್ಲಿ ಗಾಝಾ ಯುದ್ಧ ಪ್ರಾರಂಭವಾದಾಗಿನಿಂದ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಮತ್ತು ಇಸ್ರೇಲ್ ಗಡಿಯಾಚೆಗಿನ ಸಂಘರ್ಷದಲ್ಲಿ ಸಿಲುಕಿದೆ.