ಜೆರುಸೆಲಂ: ಇಸ್ರೇಲ್ (Israel) ಹಾಗೂ ಹಮಾಸ್ (Israel–Hamas war) ನಡುವಿನ ಕದನ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರೆ, ಲಕ್ಷಾಂತರ ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಯುದ್ಧದ ಭೀತಿ ಜನರನ್ನು ಬೆಚ್ಚಿ ಬೀಳಿಸಿದೆ. ಈ ನಡುವೆ ಯುದ್ಧದ ಪರಿಣಾಮದಿಂದಾಗಿ ಖಿನ್ನತೆಗೆ ಒಳಗಾಗಿದ್ದ (Depression) ಇಸ್ರೇಲಿನ ಯುವತಿಯೊಬ್ಬಳು ತನ್ನ ಜನ್ಮದಿನದಂದೇ ( Birthday) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 22 ವರ್ಷದ ಶಿರೆಲ್ ಗೋಲನ್ ಆತ್ಮಹತ್ಯೆ ಮಾಡಿಕೊಂಡವಳು. ಇದರಿಂದ ಕೆರಳಿದ ಆಕೆಯ ಕುಟುಂಬ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರ್ಕಾರವನ್ನು ದೂಷಿಸಿದೆ.
ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲಿನಲ್ಲಿ ನಡೆದ ಸಂಗೀತ ಉತ್ಸವದ ಮೇಳೆ ಹಮಾಸ್ನ ಬಂಡುಕೋರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದರು. ಅದೇ ಸಂಗೀತ ಉತ್ಸವದ ಶಿರೆಲ್ ಗೋಲನ್ ಕೂಡ ಭಾಗವಹಿಸಿದ್ದಳು. ಅದೃಷ್ಟವಶಾತ್ ಜೀವ ಉಳಿಸಿಕೊಂಡಿದ್ದಳು. ಘಟನೆಯ ನಂತರ ಆಕೆ ಖಿನ್ನತೆಗೆ ಒಳಗಾಗಿದ್ದು, ತೀವ್ರ ಒತ್ತಡದಿಂದ ಬಳಲುತ್ತಿದ್ದಳು. ಅಂತೆಯೇ ಅಕ್ಟೋಬರ್ 20 ಭಾನುವಾರ ತನ್ನ 22ನೇ ಜನ್ಮದಿನದಂದೇ ದಿನದಂದೇ ತನ್ನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
”ನನ್ನ ಸಹೋದರಿಯ ಸಾವಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲಿ ಸರ್ಕಾರವೇ ಕಾರಣ. ಸರಿಯಾದ ನಿರ್ಣಯ ತೆಗೆದುಕೊಂಡು ಅಮಾಯಕ ಜೀವಗಳ ರಕ್ಷಣೆಯನ್ನು ಸರ್ಕಾರ ಮಾಡಬೇಕಿತ್ತು. ಅವಳ ಕಣ್ಣೆದುರೇ ಸ್ನೇಹಿತರು ಮೃತಪಟ್ಟಿದ್ದರು. ಹೀಗಾಗಿ ದಾಳಿ ಒಳಗಾದ ಬಳಿಕ ಖಿನ್ನತೆಗೆ ಜಾರಿದ್ದಳು. ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಗಲಿಲ್ಲ. ದಾಳಿಯ ಬಳಿಕ ಎರಡು ಬಾರಿ ಆಸ್ಪತ್ರೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗಲಿಲ್ಲ,” ಶಿರೆಲ್ ಗೋಲನ್ ಸಹೋದರ ಹೇಳಿದ್ದಾರೆ.
ದಾಳಿಯಲ್ಲಿ ಆಗಿದ್ದಾದರೂ ಏನು?
ಕಳೆದ ವರ್ಷ, ಶಿರೆಲ್ ಮತ್ತು ಅವಳ ಗೆಳೆಯ ದಕ್ಷಿಣ ಇಸ್ರೇಲ್ನಲ್ಲಿ ನಡೆಯುವ ನೋವಾ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದರು. ಹಮಾಸ್ ಭಯೋತ್ಪಾದಕರು ಕಿಬ್ಬುಟ್ಜ್ ರೆಯಿಮ್ ಪ್ರದೇಶಕ್ಕೆ ನುಗ್ಗಿ ಅಲ್ಲಿ ಸೇರಿದ್ದ 364 ಕೊಂದಿದ್ದರು. ದಾಳಿ ನಡೆಯುತ್ತಿದ್ದಂತೆ ಶಿರೆಲ್ ಮತ್ತು ಅವಳ ಗೆಳೆಯ ಕಾರು ಹತ್ತಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಆದರೆ ಅದು ಸಾಧ್ಯವಾಗದಿದ್ದಾಗ ಅವಿತುಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದರು. ಅವರ ಕಣ್ಣೆದುರೇ ಹಲವರನ್ನು ಕೊಲ್ಲಲಾಗಿತ್ತು.
2023ರ ಅಕ್ಟೋಬರ್ 7ರಂದು ಪ್ಯಾಲೇಸ್ತಿನ್ನ ಗಾಜಾ ಪಟ್ಟಿಯಿಂದ ಹಮಾಸ್ ಉಗ್ರರು ದಾಳಿ ನಡೆಸಿದ್ದರು. ಸುಮಾರು 1,200ಕ್ಕೂ ಹೆಚ್ಚು ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದರು. ಮರುದಿನವೇ ಇಸ್ರೇಲ್ ಯುದ್ಧ ಘೋಷಿಸಿತ್ತು. ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸುವುದರೊಂದಿಗೆ ಯುದ್ದವೂ ಅಧಿಕೃತವಾಗಿ ಆರಂಭವಾಗಿತ್ತು.
1973ರ ಯೋಮ್ ಕಿಪ್ಪೂರ್ ಯುದ್ಧದ ಬಳಿಕ ಮೊದಲ ಬಾರಿಗೆ ಯುದ್ಧ ಘೋಷಿಸಿದ ಇಸ್ರೇಲ್ನ ನಿರಂತರ ದಾಳಿಯಿಂದ ಗಾಜಾಪಟ್ಟಿ ರಣರಂಗವಾಗಿ ಮಾರ್ಪಟ್ಟಿದೆ. ಇಸ್ರೇಲ್ ಸೇನೆ ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರ ಸಂಘಟನೆಯ ಸರ್ವನಾಶಕ್ಕೆ ಪಣತೊಟ್ಟಿದ್ದು ಬಹುತೇಕ ಹಮಾಸ್ ಉಗ್ರರನ್ನು ಹೊಡೆದು ಹಾಕಿದೆ.
ಇದನ್ನೂ ಓದಿ: Yahya Sinwar: ಹಮಾಸ್ ನಾಯಕ ಯಾಹ್ಯಾ ಸಿನ್ವರ್ನನ್ನು ಹತ್ಯೆಗೈದು ಬೆರಳು ಕತ್ತರಿಸಿದ ಇಸ್ರೇಲ್ ಸೈನಿಕರು; ಕಾರಣವೇನು?