ಗಾಜಾ: ಗಾಜಾದಿಂದ(Gaza) ಸ್ಥಳಾಂತರಗೊಂಡು ಶಾಲೆಯಲ್ಲಿ ಆಶ್ರಯ ಪಡೆಯುತಿದ್ದವರನ್ನು ಗುರಿಯಾಗಿಸಿ ಬುಧವಾರ ತಡರಾತ್ರಿ ಇಸ್ರೇಲ್ ಸೇನೆಯು(Israeli airstrike) ನಡೆಸಿದ ವೈಮಾನಿಕ ದಾಳಿ ನಡೆಸಿದ ಪರಿಣಾಮ ಕನಿಷ್ಠ 34 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಾವನ್ನಪಿದವರ ಪೈಕಿ 19 ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಮಕ್ಕಳಲ್ಲಿ ಒಬ್ಬಳು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಸದಸ್ಯ ಮೊಮಿನ್ ಸೆಲ್ಮಿ ಅವರ ಪುತ್ರಿ ಎಂದು ಗುರುತಿಸಲಾಗಿದೆ. ಗಾಜಾದ ಶಾಲೆ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.
ಇಸ್ರೇಲ್ ಕಳೆದ ವಾರ ಗಾಜಾದಲ್ಲಿರುವ ಐದು ಶಾಲೆಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತ್ತು ಎನ್ನಲಾಗಿದ್ದು ಇದೀಗ ಮತ್ತೊಂದು ಶಾಲೆಯ ಮೇಲೆ ದಾಳಿ ನಡೆಸಿದೆ. ಆಗಸ್ಟ್ 4 ರಂದು, ಗಾಜಾ ನಗರದಲ್ಲಿ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಆಶ್ರಯ ನೀಡಿದ್ದ ಶಾಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು ಈ ವೇಳೆ 30 ಮಂದಿ ಮೃತಪಟ್ಟಿದ್ದರು ಮತ್ತು ಹಲವು ಮಂದಿ ಗಾಯಗೊಂಡಿದ್ದರು ಅಲ್ಲದೆ ಆಗಸ್ಟ್ 3 ರಂದು ಮತ್ತೊಂದು ಶಾಲೆಯ ಮೇಲೆ ನಡೆಸಿದ ದಾಳಿಯಲ್ಲಿ 17 ಜನರು ಸಾವನ್ನಪಿದ್ದರು.
ದಕ್ಷಿಣ ಗಾಝಾದಲ್ಲಿ ನಿರಾಶ್ರಿತ ಫೆಲೆಸ್ತೀನಿಯರಿದ್ದ ಶಿಬಿರದ ಮೇಲೆ ಇಸ್ರೇಲ್ ಕಳೆದ ಕೆಲವು ದಿನಗಳಿಂದ ವೈಮಾನಿಕ ದಾಳಿಯನ್ನು ನಡೆಸುತ್ತಲೇ ಇದೆ. ದಕ್ಷಿಣ ಗಾಝಾದಲ್ಲಿ ನಿರಾಶ್ರಿತ ಫೆಲೆಸ್ತೀನಿಯರಿದ್ದ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆಹಮಾಸ್ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಆದರೆ ಅಮಾಯಕ ನಾಗರಿಕರನ್ನು ಗುರಿ ಮಾಡಲಾಗಿದೆ ಎಂದು ಹಮಾಸ್ ಹೇಳಿಕೊಂಡಿದೆ. ಇಸ್ರೇಲ್ ದಾಳಿಗೆ ಗಾಝಾದಲ್ಲಿ ಈವೆರೆಗೆ 40,900ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಕಳೆದ ವಾರ ದಕ್ಷಿಣ ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ 6 ಮಂದಿ ಇಸ್ರೇಲ್ ಪ್ರಜೆಗಳ ಶವ ಪತ್ತೆಯಾಗಿದ್ದು, ಇಸ್ರೇಲ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಲಕ್ಷಾಂತರ ಪ್ರತಿಭಟನಾಕಾರರು ಬೀದಿಗಿಳಿದು, ಸೆರೆಯಾಳುಗಳನ್ನು ಬಿಡುಗಡೆ ಮಾಡಲು ದೇಶದ ನಾಯಕತ್ವದ ಅಸಮರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.