Friday, 22nd November 2024

Israeli Airstrike: ಹೆಜ್ಬೊಲ್ಲಾ ಉಗ್ರ ಸಂಘಟನೆಯ ಮುಂದಿನ ಮುಖಂಡ ಹಾಶೆಂ ಸಫಿದ್ದೀನ್‌ನನ್ನೂ ಸಾಯಿಸಿದ ಇಸ್ರೇಲ್

Hashem Safieddine

ಜೆರುಸಲೆಮ್: ‌ಲೆಬನಾನ್‌ನ ಹೆಜ್ಬೊಲ್ಲಾ (Hezbollah) ಉಗ್ರ ಸಂಘಟನೆಗೆ (Terrorist outfit) ಇಸ್ರೇಲ್ ಸೇನೆ (Israel military) ಮತ್ತೊಂದು ಸುತ್ತಿನ ಮರ್ಮಾಘಾತ (Israeli Airstrike) ನೀಡಿದೆ. ಹೆಜ್ಬೊಲ್ಲಾ ಸಂಘಟನೆ ಅಧಿನಾಯಕ ಹಸನ್ ನಸ್ರಲ್ಲಾ (Hassan Nasrallah) ಹತ್ಯೆ ಬಳಿಕ ಇದೀಗ ಈ ಉಗ್ರ ಸಂಘಟನೆಯ ಉಪ ನಾಯಕ ಎಂದೇ ಬಿಂಬಿತನಾಗಿದ್ದ ಹಾಶೆಂ ಸಫಿದ್ದೀನ್ (Hashem Safieddine) ಎಂಬಾತನನ್ನೂ ಸಾಯಿಸಿದೆ.

ಲೆಬನಾನ್‌ನ ರಾಜಧಾನಿ ಬೈರೂತ್‌ ನಗರದ ದಕ್ಷಿಣ ಭಾಗದಲ್ಲಿ ನಡೆದ ಏರ್ ಸ್ಟ್ರೈಕ್‌ನಲ್ಲಿ ಹಾಶೆಂ ಸಫಿದ್ದೀನ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಭದ್ರತಾ ಪಡೆ (ಐಡಿಎಫ್) ಖಚಿತಪಡಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಇಸ್ರೇಲ್ ಭದ್ರತಾ ಪಡೆ, ‘ಕಳೆದ ಮೂರು ವಾರಗಳಿಂದ ನಾವು ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆ ವಿರುದ್ಧ ನಿರಂತರ ಸಮರ ನಡೆಸುತ್ತಿದ್ದೇವೆ. ಇದೀಗ ನಾವು ಹೆಜ್ಬೊಲ್ಲಾ ಉಗ್ರ ಸಂಘಟನೆಯ ಕಾರ್ಯಕಾರಿಯ ಮಂಡಳಿಯ ಮುಖ್ಯಸ್ಥನಾಗಿದ್ದ ಹಾಶೆಂ ಸಫಿದ್ದೀನ್‌ನನ್ನು ಹತ್ಯೆ ಮಾಡಿದ್ದೇವೆ’ ಎಂದಿದೆ.

ಹಾಶೆಂ ಸಫಿದ್ದೀನ್ ಮಾತ್ರವಲ್ಲ, ಹೆಜ್ಬೊಲ್ಲಾ ಉಗ್ರ ಸಂಘಟನೆಯ ಬೇಹುಗಾರಿಕಾ ನಿರ್ದೇಶಕನಾಗಿದ್ದ ಅಲಿ ಹುಸ್ಸೈನಿ ಹಾಝಿಮಾನನ್ನೂ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಈ ಇಬ್ಬರೂ ನಾಯಕರ ಜೊತೆಯಲ್ಲೇ ವಾಯುದಾಳಿಯಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಹಲವು ಕಮಾಂಡರ್‌ಗಳೂ ಹತರಾಗಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಈ ಮಾಹಿತಿಯನ್ನು ಹೆಜ್ಬೊಲ್ಲಾ ಉಗ್ರ ಸಂಘಟನೆ ಇನ್ನೂ ಖಚಿತಪಡಿಸಿಲ್ಲ. ಹಾಶೆಂ ಸಫಿದ್ದೀನ್‌ನನ್ನು ಹತ್ಯೆ ಮಾಡಲಾಗಿದೆ ಎಂಬರ್ಥದ ಹೇಳಿಕೆಯನ್ನು ಅಕ್ಟೋಬರ್ 8 ರಂದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ನಾವು ಈವರೆಗೆ ಸಾವಿರಾರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದೇವೆ. ಹೆಜ್ಬೊಲ್ಲಾ ಅಧಿನಾಯಕ ಹಸನ್ ನಸ್ರಲ್ಲಾ, ಆತನ ಉತ್ತರಾಧಿಕಾರಿ ಹಾಗೂ ಉತ್ತರಾಧಿಕಾರಿಯ ಉತ್ತರಾಧಿಕಾರಿಯನ್ನೂ ಹತ್ಯೆ ಮಾಡಿದ್ದೇವೆ ಎಂದು ನೆತನ್ಯಾಹು ಹೇಳಿಕೊಂಡಿದ್ದರು.

ಬೇಹುಗಾರಿಕಾ ಮಾಹಿತಿ ಆಧರಿತ ದಾಳಿ ಇದಾಗಿದ್ದು, ಹೆಜ್ಬೊಲ್ಲಾ ಉಗ್ರ ಸಂಘಟನೆಯ ಪ್ರಮುಖ ಬೇಹುಗಾರಿಕಾ ಮುಖ್ಯ ಕಚೇರಿಯನ್ನೇ ಉಡಾಯಿಸಿರೋದಾಗಿ ಹೇಳಿದೆ. ಮೂಲಗಳ ಪ್ರಕಾರ ಇಸ್ರೇಲ್ ವಾಯು ದಾಳಿ ನಡೆಸುವ ವೇಳೆ ಹೆಜ್ಬೊಲ್ಲಾದ ಎರಡನೇ ಹಂತದ ನಾಯಕನ ಜೊತೆಯಲ್ಲೇ 25 ಭಯೋತ್ಪಾದಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Israeli Airstrike: ಇಸ್ರೇಲ್‌ ಪಡೆಗಳಿಂದ ಉತ್ತರ ಗಾಜಾದ ಮೇಲೆ ದಾಳಿ; ಕನಿಷ್ಠ 73 ಮಂದಿ ಸಾವು