Thursday, 12th December 2024

ಇಸ್ರೇಲ್‌ ಸರ್ಕಾರ ಮತ್ತೆ ಪತನ: ಮಾರ್ಚ್‌ 23ಕ್ಕೆ ಮತದಾನ ನಿಗದಿ

ಜೆರುಸಲೆಮ್: ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್‌ ಸರ್ಕಾರ ಮತ್ತೆ ಪತನವಾಗಿದ್ದು, ಸಂಸತ್ ವಿಸರ್ಜನೆಯಾಗಿದೆ.

ನೆತನ್ಯಾಹು ನೇತೃತ್ವದ ಇಸ್ರೇಲ್ ಧಿಡೀರ್ ಪತನವಾಗಿದ್ದು, ಮತ್ತೊಮ್ಮೆ ಅವಧಿಗೂ ಮುನ್ನವೇ ಚುನಾವಣೆ ಎದುರಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಸರ್ಕಾರ ಪತನವಾಗಿದ್ದು, ನಾಲ್ಕನೇ ಬಾರಿಗೆ ಇಸ್ರೇಲ್‌ನಲ್ಲಿ ಚುನಾವಣೆ ನಡೆಯುತ್ತಿದೆ.

ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಏಳು ತಿಂಗಳ ಹಿಂದೆ ಪ್ರಮುಖ ಎದುರಾಳಿ ಬೆನ್ನಿ ಗಾಂಟ್ಜ್ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚಿಸಿದ್ದರು. ನೆತನ್ಯಾಹು ಅವರ ಲಿಕುಡ್‌ ಪಾರ್ಟಿ ಮತ್ತು ಗಾಂಟ್ಜ್ ನೇತೃತ್ವದ ಬ್ಲೂ ಆಯಂಡ್‌ ವೈಟ್‌ ಪಾರ್ಟಿ ಮೈತ್ರಿ ಸರ್ಕಾರವು ಉಭಯ ಪಕ್ಷಗಳ ಕಿತ್ತಾಟದಿಂದಾಗಿ ಕೊನೆಯಾಗಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಯ ಬೇಕಿದ್ದು, ಮಾರ್ಚ್‌ 23ಕ್ಕೆ ಮತದಾನ ನಿಗದಿಯಾಗಿದೆ ಎಂದು ವರದಿಯಾಗಿದೆ.

2020ರ ಬಜೆಟ್‌ ಅನುಮೋದನೆಗೆ ನೀಡಲಾಗಿದ್ದ ಕಾನೂನಾತ್ಮಕ ಗಡುವು ಮುಕ್ತಾಯವಾದ ಬೆನ್ನಲ್ಲೇ ಸಂಸತ್ ತಾನಾಗಿಯೇ ವಿಸರ್ಜಿಸಲ್ಪಟ್ಟಿದೆ. ಹಣಕಾಸು ಖಾತೆಯನ್ನು ನೆತನ್ಯಾಹು ಪಕ್ಷವೇ ನಿರ್ವಹಿಸುತ್ತಿತ್ತು. ಆದರೆ ಬಜೆಟ್‌ ಮಂಡಿಸಲು ನಿರಾಕರಿಸಿತ್ತು. ಗಾಂಟ್ಜ್ ಪಕ್ಷದೊಂದಿಗಿನ ಮೈತ್ರಿ ಒಪ್ಪಂದ ಉಲ್ಲಂಘನೆ ಸರ್ಕಾರದ ಪತನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.