Friday, 13th December 2024

ಭೂಕುಸಿತ: 80 ಮಂದಿ ನಾಪತ್ತೆ, ರಕ್ಷಣಾ ಕಾರ‍್ಯಾಚರಣೆ

ಟೋಕಿಯೊ: ಎರಡು ದಿನಗಳ ಹಿಂದೆ ಭಾರಿ ಮಳೆಯಿಂದಾಗಿ ಜಪಾನ್‌ನ ಅಟಾಮಿ ಪಟ್ಟಣದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 80 ಮಂದಿ ನಾಪತ್ತೆಯಾಗಿದ್ದು, ಸೋಮವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ರಕ್ಷಣಾ ಸಿಬ್ಬಂದಿ ಭಗ್ನಾವಶೇಷಗಳಡಿ ಸಿಲುಕಿದ ಜನರಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ‘ಸೋಮವಾರದ ವೇಳೆಗೆ ರಕ್ಷಣಾ ಸಿಬ್ಬಂದಿ ಸಂಖ್ಯೆ 1500ಕ್ಕೆ ಏರಿಕೆಯಾಗಿದೆ. ಕಾರ್ಯಾಚರಣೆಯಲ್ಲಿ ಇನ್ನಷ್ಟು ಸಿಬ್ಬಂದಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ’ ಎಂದು ಅಧಿಕಾರಿಗಳು ತಿಳಿಸಿದರು.

ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸೇನಾ ಸಿಬ್ಬಂದಿ ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಜಪಾನ್‌ ಪ್ರಧಾನಿ ಯೋಶಿಹಿದೆ ಸುಗಾ ಹೇಳಿದರು. 36,000 ಜನರು ಇರುವ ಅಟಾಮಿ ನಗರದಲ್ಲಿ 113 ಮಂದಿ ನಾಪತ್ತೆಯಾಗಿರುವ ಸಾಧ್ಯತೆಗಳಿವೆ

ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ ಎಂಬುದಾಗಿ ಭಾನುವಾರ ತಿಳಿದು ಬಂದಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ನಾಪತ್ತೆಯಾದವರ ಸಂಖ್ಯೆ 80ಕ್ಕೆ ಇಳಿಕೆಯಾಗಿದೆ ಎಂದು ವರದಿ ಮಾಡಿದೆ.