Tuesday, 19th November 2024

Jeshoreshwari Kali Temple: ಬಾಂಗ್ಲಾದ ಜೇಶೋರೇಶ್ವರಿ ಕಾಳಿ ಮಾತೆಗೆ ಮೋದಿ ನೀಡಿದ ಚಿನ್ನದ ಕಿರೀಟ ಕಳವು

Jeshoreshwari Kali Temple

ಢಾಕಾ: 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬಾಂಗ್ಲಾದೇಶದ ಸತ್ಖಿರಾ ನಗರದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನ(Jeshoreshwari Kali Temple)ಕ್ಕೆ ಕೊಡುಗೆಯಾಗಿ ನೀಡಿದ ಚಿನ್ನದ ಕಿರೀಟ ಕಳವಾಗಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

2021ರ ಮಾರ್ಚ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಜೇಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಈ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಗುರುವಾರ (ಅಕ್ಟೋಬರ್‌ 10) ತಡರಾತ್ರಿ ಸುಮಾರು 2 ಗಂಟೆಗೆ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನದ ಅರ್ಚಕ ದಿಲೀಪ್‌ ಮುಖರ್ಜಿ ಪೂಜೆ ಸಲ್ಲಿಸಿ ಬಾಗಿಲು ಹಾಕಿ ತೆರಳಿದ ನಂತರ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಶುಕ್ರವಾರ ಬೆಳಗ್ಗೆ ಸ್ವಚ್ಛತಾ ಸಿಬ್ಬಂದಿ ಕಿರೀಟ ಕಳವಾಗಿರುವ ವಿಚಾರವನ್ನು ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ದೇವಸ್ಥಾನದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅದರಲ್ಲಿ ಯುವಕನೊಬ್ಬ ಚಿನ್ನದ ಕಿರೀಟವನ್ನು ಹೊತ್ತಿರುವ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ.

ಶ್ಯಾಮನಗರದ ಪೊಲೀಸ್ ಠಾಣಾಧಿಕಾರಿ ಫಕರ್ ತೈಜುರ್ ರೆಹಮಾನ್ ಮಾತನಾಡಿ, ʼʼಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಉಡುಗೊರೆಯನ್ನು ಕಳ್ಳರು ಕದ್ದಿದ್ದಾರೆ. ಅದನ್ನು ಕಂಡುಹಿಡಿಯಲು ನಾವು ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ತನಿಖೆ ಆರಂಭವಾಗಿದೆ. ಆರೋಪಿಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.

51 ಶಕ್ತಿ ಪೀಠಗಳಲ್ಲಿ ಒಂದು

ಜೇಶೋರೇಶ್ವರಿ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ʼಜೇಶೋರೇಶ್ವರಿʼ ಎಂದರೆ ʼಜೇಶೋರ್ ದೇವತೆʼ. 2021ರ ಮಾರ್ಚ್‌ನಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ದ ಮೋದಿ ದೇವಿ ವಿಗ್ರಹಕ್ಕೆ ಕಿರೀಟ ತೊಡಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ತಾವು ಭೇಟಿ ನೀಡುತ್ತಿರುವ ವಿಡಿಯೊವನ್ನು ಮೋದಿ ಹಂಚಿಕೊಂಡಿದ್ದರು. ವಿಶೇಷ ಎಂದರೆ ಕೋವಿಡ್‌-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಮೋದಿ ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿತ್ತು. ಈಶ್ವರಿಪುರ ಗ್ರಾಮದಲ್ಲಿರುವ ಈ ದೇವಸ್ಥಾನವನ್ನು ಕಾಳಿ ಮಾತೆಗಾಗಿ ನಿರ್ಮಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Bangladesh Government : ಭಾರತದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಬಾಂಗ್ಲಾದೇಶ

ಈ ದೇವಾಲಯವನ್ನು 12ನೇ ಶತಮಾನದಲ್ಲಿ ಬ್ರಾಹ್ಮಣ ನಿರ್ಮಿಸಿದರು. 13ನೇ ಶತಮಾನದಲ್ಲಿ ಈ ದೇವಾಲಯವನ್ನು ಲಕ್ಷ್ಮಣ್ ಸೇನ್ ನವೀಕರಿಸಿದರು. ಬಳಿಕ 16ನೇ ಶತಮಾನದಲ್ಲಿ ರಾಜಾ ಪ್ರತಾಪದಿತ್ಯ ಮತ್ತೊಮ್ಮೆ ದೇವಾಲಯವನ್ನು ನವೀಕರಿಸಿದರು. ಧಾರ್ಮಿಕವಾಗಿ ಬಹಳ ಪ್ರಾಮುಖ್ಯತೆ ಹೊಂದಿರುವ ಈ ದೇಗುಲಕ್ಕೆ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ನವರಾತ್ರಿಯನ್ನು ಇಲ್ಲಿ ಬಹಳ ವಿಜಂಭೃಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ವೇಳೆಯಲ್ಲೇ ದೇಗುಲದಲ್ಲಿ ಕಳವು ನಡೆದಿರುವುದು ಭಕ್ತರಲ್ಲಿ ಕಳವಳವನ್ನುಂಟು ಮಾಡಿದೆ. ಶೀಘ್ರದಲ್ಲೇ ಕಳ್ಳರನ್ನು ಹಿಡಿದು ಕಿರೀಟ ಮರಳಿ ತರಬೇಕು ಎಂದು ಆಗ್ರಹಿಸಿದ್ದಾರೆ.