Friday, 22nd November 2024

Jimmy Carter : 100ನೇ ವಸಂತಕ್ಕೆ ಕಾಲಿಟ್ಟ ಜಿಮ್ಮಿ ಕಾರ್ಟರ್, ಈ ಮೈಲಿಗಲ್ಲು ತಲುಪಿದ ಮೊದಲ ಅಮೆರಿಕ ಅಧ್ಯಕ್ಷ

Jimmy Carter

ನ್ಯೂಯಾರ್ಕ್‌: ಅಮೆರಿಕದ 39ನೇ ಅಧ್ಯಕ್ಷ ಜಿಮ್ಮಿ ಕಾರ್ಟರ್ (Jimmy Carter) ಮಂಗಳವಾರ 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಅವರು ಆ ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಬದುಕಿದ ಅಧ್ಯಕ್ಷ (America President) ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಕ್ಟೋಬರ್ 1, 1924ರಂದು ಜಾರ್ಜಿಯಾದಲ್ಲಿ ಜನಿಸಿದ್ದ ಕಾರ್ಟರ್ ಪ್ರಜಾಪ್ರಭುತ್ವ, ಶಾಂತಿ ಮತ್ತು ಜಾಗತಿಕ ಅಭಿವೃದ್ಧಿ ಉತ್ತೇಜಿಸುವಲ್ಲಿ ಪ್ರಮುಖರೆನಿಸಿಕೊಂಡಿದ್ದರು. ಅಲ್ಲದೆ, ಅಧ್ಯಕ್ಷೀಯ ಕಾರ್ಯಕ್ಕಾಗಿ ಮೆಚ್ಚುಗೆ ಗಳಿಸಿದ್ದರು.

1977ರಿಂದ 1981ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಾರ್ಟರ್, 43 ವರ್ಷಗಳ ಅಧ್ಯಕ್ಷೀಯ ಅವಧಿಯಲ್ಲಿ ಸುದೀರ್ಘ ಅವಧಿ ಆಡಳಿತ ನಡೆಸಿದ ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಕಾರ್ಟರ್ ಅವರು ಜಾರ್ಜಿಯಾದ ಗವರ್ನರ್ ಆಗುವ ಮೊದಲು ರಾಜ್ಯ ಸೆನೆಟರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

ಅಧಿಕಾರ ತೊರೆದ ನಂತರ ಅವರು ಮತ್ತು ಅವರ ಪತ್ನಿ ರೋಸಲಿನ್ ಮಾನವ ಹಕ್ಕುಗಳು ಮತ್ತು ಸಂಘರ್ಷ ಪರಿಹಾರ ಮಾಡಲೆಂದೇ ಮೀಸಲಾದ ಎನ್‌ಜಿಒ ಕಾರ್ಟರ್ ಸೆಂಟರ್ ಸ್ಥಾಪಿಸಿದ್ದರು. 1977 ರಿಂದ 1981ರವರೆಗೆ ಅಮೆರಿಕದ ಪ್ರಥಮ ಮಹಿಳೆಯಾಗಿದ್ದ ಅವರ ಪತ್ನಿ ರೋಸಲಿನ್ ಕಾರ್ಟರ್ 2023 ರ ನವೆಂಬರ್‌ನಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.

2002ರಲ್ಲಿ, ಶಾಂತಿ ಉತ್ತೇಜಿಸುವ ಮತ್ತು ವಿಶ್ವಾದ್ಯಂತ ಮಾನವ ಹಕ್ಕುಗಳನ್ನು ಪ್ರತಿಪಾದಿಸುವ ಕೆಲಸಕ್ಕಾಗಿ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆದಿದ್ದರು. 2015ರಲ್ಲಿ ಕಾರ್ಟರ್ ಅವರ ಮೆದುಳಿನಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಫೆಬ್ರವರಿ 2023 ರಲ್ಲಿ ತುರ್ತು ಆರೋಗ್ಯ ಕಾಳಜಿ ವಿಭಾಗ ಸೇರುವವರೆಗೆ ಅನೇಕ ಆರೋಗ್ಯ ಸವಾಲುಗಳ ಹೊರತಾಗಿಯೂ, ಅವರು ಸ್ಫೂರ್ತಿ ತುಂಬಿದ್ದರು.

ಇದನ್ನೂ ಓದಿ: PM Modi Visit US : ಪ್ರಧಾನಿ ಮೋದಿಯನ್ನು ಅಪ್ಪಿ ಬರಮಾಡಿಕೊಂಡ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌

ಜಿಮ್ಮಿ ಕಾರ್ಟರ್ 100 ವರ್ಷ ಪೂರೈಸಿದ ಮೊದಲ ಅಮೆರಿಕ ಅಧ್ಯಕ್ಷ. ಈ ಹಿಂದೆ 2018ರಲ್ಲಿ 94ನೇ ವಯಸ್ಸಿನಲ್ಲಿ ನಿಧನರಾದ ಜಾರ್ಜ್ ಎಚ್ ಡಬ್ಲ್ಯೂ ಬುಷ್ ಮೃತಪಟ್ಟಿದ್ದರೆ, ರೊನಾಲ್ಡ್ ರೇಗನ್ ಮತ್ತು ಜೆರಾಲ್ಡ್ ಫೋರ್ಡ್ ಇಬ್ಬರೂ 93 ವರ್ಷಗಳ ಕಾಲ ಬದುಕಿದ್ದರು.

ಬೈಡೆನ್ ಹಿರಿಯ ಅಧ್ಯಕ್ಷ

ಹಾಲಿ ಅಧ್ಯಕ್ಷ ಜೋ ಬೈಡನ್ 81 ವರ್ಷ ವಯಸ್ಸಿನ ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ದಾಖಲೆ ಹೊಂದಿದ್ದಾರೆ. ಡೊನಾಲ್ಡ್ ಟ್ರಂಪ್ ಚುನಾವಣೆ ಗೆದ್ದು ಅವಧಿ ಮುಗಿಸಿದರೆ ಆ ದಾಖಲೆಯನ್ನು ಮುರಿಯಬಹುದು.

100 ವರ್ಷದ ಕಾರ್ಟರ್ ಅವರು 59 ವರ್ಷದ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅನುಮೋದಿಸಿದ್ದಾರೆ. ನವೆಂಬರ್ 5 ರಂದು ನಡೆಯಲಿರುವ ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಮಾಜಿ ಅಧ್ಯಕ್ಷರು ಎದುರು ನೋಡುತ್ತಿದ್ದಾರೆ ಎಂದು ಅವರ ಮೊಮ್ಮಗ ಜೇಸನ್ ಕಾರ್ಟರ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ.