Friday, 22nd November 2024

ಬೇಬಿ ಪೌಡರ್‌ನಿಂದ ಕ್ಯಾನ್ಸರ್: ವ್ಯಕ್ತಿಗೆ 18.8 ಮಿಲಿಯನ್ ಡಾಲರ್ ನೀಡಲು ಆದೇಶ

ಕ್ಯಾಲಿಫೋರ್ನಿಯಾ: ಜಾನ್ಸನ್ ಮತ್ತು ಜಾನ್ಸನ್(Johnson & Johnson) ಬೇಬಿ ಪೌಡರ್‌ ನಿಂದ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಹೇಳಿದ ಕ್ಯಾಲಿಫೋರ್ನಿಯಾದ ವ್ಯಕ್ತಿಗೆ 18.8 ಮಿಲಿಯನ್ ಡಾಲರ್ ಪಾವತಿಸಬೇಕು ಎಂದು ಯುಎಸ್‌ ನ್ಯಾಯಾಲಯದ ತೀರ್ಪುಗಾರರು ಕಂಪನಿಗೆ ಆದೇಶಿಸಿದ್ದಾರೆ.

ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಅಮೆರಿಕದಲ್ಲಿ ಮಾತ್ರವಲ್ಲದೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಅತ್ಯಂತ ಜನಪ್ರಿಯ ಬೇಬಿ ಉತ್ಪನ್ನವಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ, ಜಾನ್ಸನ್ ಮತ್ತು ಜಾನ್ಸನ್ ಬೇಬಿ ಪೌಡರ್ ಬಳಸಿದ ನಂತರ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಬಂದಿದೆ. ಈ ಪ್ರಕರಣದಲ್ಲಿ ವಲಾಡೆಜ್ ಎಂಬ ವ್ಯಕ್ತಿಯ ಪರವಾಗಿ ತೀರ್ಪುಗಾರರು ತೀರ್ಪು ನೀಡಿದ್ದಾರೆ.

24 ವರ್ಷದ ಹೆರ್ನಾಂಡೆಜ್ ಅವರು ಬಾಲ್ಯದಿಂದಲೂ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯ ಪೌಡರ್‌ ಅನ್ನು ಬಳಸಿದ ಪರಿಣಾಮವಾಗಿ ತನ್ನ ಹೃದಯದ ಸುತ್ತಲಿನ ಅಂಗಾಂಶದಲ್ಲಿ ಮೆಸೊಥೆಲಿಯೊಮಾ ಎಂಬ ಮಾರಣಾಂತಿಕ ಕ್ಯಾನ್ಸರ್‌ಗೆ ಒಳಗಾಗಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಹೆರ್ನಾಂಡೆಜ್ ಕಳೆದ ವರ್ಷ ಜೆ & ಜೆ ವಿರುದ್ಧ ಓಕ್ಲ್ಯಾಂಡ್‌ನ ಕ್ಯಾಲಿಫೋರ್ನಿಯಾ ರಾಜ್ಯ ನ್ಯಾಯಾಲಯದಲ್ಲಿ ವಿತ್ತೀಯ ಹಾನಿಯನ್ನು ಕೋರಿ ಮೊಕದ್ದಮೆ ಹೂಡಿದರು.