Friday, 22nd November 2024

Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್​ ಕಚೇರಿ ಮೇಲೆ ಗುಂಡಿನ ದಾಳಿ

Kamala Harris

ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ (US election 2024)ಯ ಚಟುವಟಿಕೆ ಗರಿಗೆದರಿದ್ದು, ಅಬ್ಬರದ ಪ್ರಚಾರ ನಡೆಯುತ್ತಿದೆ. ಈ ಮಧ್ಯೆ ಅಧ್ಯಕ್ಷೀಯ ಸ್ಥಾನದ ಭಾರತೀಯ ಮೂಲದ ಅಭ್ಯರ್ಥಿ ಡೆಮಾಕ್ರಟಿಕ್‌ ಪಕ್ಷ(Democratic Party)ದ ಕಮಲಾ ಹ್ಯಾರಿಸ್‌ (Kamala Harris) ಅವರ ಕಚೇರಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅರಿಜೋನಾದಲ್ಲಿರುವ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರ ಕಚೇರಿಯ ಮೇಲೆ ಮಧ್ಯರಾತ್ರಿ ಹಲವಾರು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಬುಧವಾರ ದೃಢಪಡಿಸಿದ್ದಾರೆ.

ʼʼಕಟ್ಟಡದ ಕಿಟಕಿಗಳಿಂದ ಗುಂಡು ಹಾರಿಸಲಾಗಿದ್ದು, ಮಧ್ಯರಾತ್ರಿ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆʼʼ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಇದು ಆ ಕಟ್ಟಡದಲ್ಲಿ ಕೆಲಸ ಮಾಡುವವರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟು ಮಾಡಿದೆʼʼ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಸಾರ್ಜೆಂಟ್ ರಯಾನ್ ಕುಕ್ ಹೇಳಿದ್ದಾರೆ. ಮುಂಭಾಗದ ಕಟ್ಟಡದ ಕಿಟಕಿಗಳ ಮೂಲಕ ಗುಂಡು ಹಾರಿಸಿರಬಹುದು ಎಂದು ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಪ್ರಚಾರ ಕಚೇರಿಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್‌ ಮೇಲೆ 2 ಬಾರಿ ದಾಳಿ

ಚುನಾವಣಾ ಪ್ರಚಾರ ಆರಂಭಿಸಿದ ಬಳಿಕ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ 2 ಬಾರಿ ದಾಳಿ ನಡೆದಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆ ಮೊದಲ ಗುಂಡಿನ ದಾಳಿ ನಡೆದಿತ್ತು. ಆಗ ಟ್ರಂಪ್‌ ಕೂದಲೆಳೆ ಅಂತರದಿಂದ ಪಾರಾಗಿದ್ದರು. ಅದಾದ ಬಳಿಕ ಸೆಪ್ಟೆಂಬರ್‌ 15ರಂದು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯಿಂದಲೂ ಅವರು ಪಾರಾಗಿದ್ದರು. ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕೋರ್ಸ್‌ನಲ್ಲಿ ಆಡುತ್ತಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಶಂಕಿತ ರಿಯಾನ್ ವೆಸ್ಲಿ ರೌತ್ ಪೊದೆಯೊಂದರ ಬಳಿ ಅವಿತು ಕುಳಿತಿದ್ದ. ಸೀಕ್ರೆಟ್ ಸರ್ವಿಸ್ ಏಜೆಂಟರು ಗುಂಡು ಹಾರಿಸಿದಾಗ ಪೊದೆಗಳಿಂದ ಹೊರಬಂದು ಕಪ್ಪು ಕಾರಿನಲ್ಲಿ ಪರಾರಿಯಾಗಿದ್ದ. ನಂತರ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಈ ಘಟನೆ ಮಾಸುವ ಮುನ್ನ ಇದೀಗ ಅವರ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್‌ ಕಚೇರಿ ಮೇಲೆ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಕಮಲಾ ಹ್ಯಾರಿಸ್‌ಗೆ ಮುನ್ನಡೆ

ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಏಷ್ಯನ್-ಅಮೆರಿಕನ್ ಮತದಾರರಲ್ಲಿ ಶೇ. 38ರಷ್ಟು ಅಂಕಗಳೊಂದಿಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುಂದಿದ್ದಾರೆ ಸಮೀಕ್ಷೆ ತಿಳಿಸಿದೆ. ಕೆಲವು ದಿನಗಳ ಹಿಂದೆ ಫಿಲಿಡೆಲ್ಫಿಯಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಲಾ ಹ್ಯಾರಿಸ್‌ ಡೊನಾಲ್ಡ್‌ ಟ್ರಂಪ್‌ ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ದಾಳಿ ನಡೆಸಿದ್ದರು.

ಈ ಸುದ್ದಿಯನ್ನೂ ಓದಿ: US election 2024: ʻಪುಟಿನ್‌ ನಿಮ್ಮನ್ನು ಊಟಕ್ಕೆ ತಿಂದು ಹಾಕುತ್ತಾರೆ..ʼ- ಟ್ರಂಪ್‌ ವಿರುದ್ಧ ಕಮಲಾ ಗುಡುಗು