Thursday, 19th September 2024

ಅಮೆರಿಕದ ಪಠ್ಯದಲ್ಲಿ ಕನ್ನಡ ಡಿಂಡಿಮ

ಬೆಂಕಿ ಬಸಣ್ಣ, ನ್ಯೂಯಾರ್ಕ್‌

ವೇಕ್ ಕೌಂಟಿಯ ಹೈಸ್ಕೂಲಿನಲ್ಲಿ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅಧಿಕೃತ ಅನುಮೋದನೆ

ಅಮೆರಿಕಕ್ಕೆ 1970-80ರ ದಶಕದಲ್ಲಿ ಕರ್ನಾಟಕದಿಂದ ಬಹಳಷ್ಟು ವೈದ್ಯರು ವಲಸೆ ಬಂದರು. ಕಳೆದ 20 ವರ್ಷಗಳಿಂದ ಕರ್ನಾಟಕದಿಂದ ಲಕ್ಷಾಂತರ ಜನ ಸಾಫ್ಟ್‌‌ವೇರ್ ಎಂಜಿನಿಯರ್‌ಗಳು ಅಮೆರಿಕಕ್ಕೆ ವಲಸೆ ಬಂದಿದ್ದಾರೆ ಮತ್ತು ಬರುತ್ತಲೇ ಇದ್ದಾರೆ.
ಹೀಗೆ ಇಲ್ಲಿಗೆ ವಲಸೆ ಬಂದಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ-ಕಲಿ ಶಾಲೆಗಳನ್ನು ವೀಕೆಂಡ್ ಗಳಲ್ಲಿ ನಡೆಸುತ್ತಿದ್ದಾರೆ.

ಆದರೆ ಇವೆಲ್ಲವೂ ಸ್ವಯಂ ಸೇವಕರಿಂದ ನಡೆಯುತ್ತಿರುವ ಅನಧಿಕೃತ ಶಾಲೆಗಳು. ಇಲ್ಲಿನ ಹೈಸ್ಕೂಲುಗಳಲ್ಲಿ ವಿವಿಧ ವಿದೇಶಿ ಭಾಷೆಗಳನ್ನು ಕಲಿಸಲಾಗುತ್ತದೆ. ಉದಾಹರಣೆಗೆ ನಮ್ಮ ನಿಸ್ಕಯೂನ ಹೈಸ್ಕೂಲಿನಲ್ಲಿ ಲ್ಯಾಟಿನ್, ಜರ್ಮನ್, ಫ್ರೆಂಚ್, ಜಪನೀಸ್, ಚೈನೀಸ್ ಹೀಗೆ ಅನೇಕ ಭಾಷೆಗಳನ್ನು ಕಲಿಸಲಾಗುತ್ತದೆ. ಇದರಲ್ಲಿ ನನ್ನ ಮಗ ಅವನೀಶ್ ಬೆಂಕಿ ಲ್ಯಾಟಿನ್, ಸ್ಪ್ಯಾನಿಷ್, ಚೈನೀಸ್
ಜತೆಗೆ ಇಂಗ್ಲಿಷ್ ಸಾಹಿತ್ಯವನ್ನೂ ಓದುತ್ತಿದ್ದಾನೆ.

ಅಮೆರಿಕ ಹೈಸ್ಕೂಲ್‌ಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಕಲಿಯುವ ಅವಕಾಶ ಇಲ್ಲ ಎಂಬ ಕೊರಗು ನಮ್ಮನ್ನು ಕಾಡುತ್ತಿತ್ತು. ಇಂಥ ಸನ್ನಿವೇಶದಲ್ಲಿ ಈ ದಿನ ನಾವೆಲ್ಲ ಬಹಳಷ್ಟು
ಹೆಮ್ಮೆಪಡುವ ಕ್ಷಣ.

ಏಕೆಂದರೆ ನಾರ್ತ್ ಕ್ಯಾರೊಲಿನ ರಾಜ್ಯದ ವೇಕ್ ಕೌಂಟಿಯ ಹೈಸ್ಕೂಲಿನಲ್ಲಿ ಮೊದಲ ಬಾರಿಗೆ ಕನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಕಲಿಯಲು ಅಧಿಕೃತವಾಗಿ ಅನುಮೋದನೆ ದೊರೆತಿದೆ. ಇದರಿಂದಾಗಿ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಮಾತ್ರವಲ್ಲದೆ, ಅಮೆರಿಕದಲ್ಲಿರುವ ಬಿಳಿಯ ಮತ್ತು ಕರಿಯ ಜನರು ಕೂಡ ನಮ್ಮ ಕನ್ನಡ ಭಾಷೆಯನ್ನು ಕಲಿಯಬಹುದು.
ಕರ್ನಾಟಕದ ಸರಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂಬ ನೆಪವೊಡ್ಡಿ, ಅವುಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿರುವಾಗ, ದೂರದ ಅಮೆರಿಕದ ಸರಕಾರಿ ಹೈಸ್ಕೂಲುಗಳಲ್ಲಿ ಕನ್ನಡ
ಭಾಷೆಯನ್ನು ಅಧಿಕೃತ ವಿದೇಶಿ ಭಾಷೆಯಾಗಿ ಕಲಿಸುವ ಸುವರ್ಣ ಅವಕಾಶ ದೊರೆತಿದೆ.

ಈ ಯಶಸ್ಸಿನ ಹಿಂದೆ ಅಮೆರಿಕದಲ್ಲಿ ಕನ್ನಡ ಪ್ರೇಮಿಗಳ ಸತತ 15 ವರ್ಷಗಳ ಪ್ರಯತ್ನ ಇದೆ. ಅಮೆರಿಕ ಕನ್ನಡ ಅಕಾಡೆಮಿಯ ಶಿವ ಗೌಡರ್, ಡಾ.ಅಶೋಕ್ ಕಟ್ಟಿಮನಿ, ಮಧು ರಂಗಪ್ಪಗೌಡ, ಅರುಣ್ ಸಂಪತ್, ಗುರುಪ್ರಸಾದ್ ರಾವ್, ನಾವಿಕ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ, ಕನ್ನಡ ಅಕಾಡೆಮಿಯ ಇತರ ಸ್ವಯಂ ಸೇವಕರಾದ ನವೀನ್ ಮಲ್ಲಿಕಾರ್ಜುನಯ್ಯ, ಸಂಧ್ಯಾ ಸೂರ್ಯಪ್ರಕಾಶ್,
ಶಶಿ ಬಸವರಾಜ್, ಗೌತಮ್ ಜಯಣ್ಣ, ಗೋಪಾಲಕೃಷ್ಣ ಸುಬ್ರಮಣಿ, ಮಹಾಂತೇಶ್ವರ ಸಿ.ಎಂ ಮತ್ತು ಸುನೈನಾ ಶರ್ಮ ಮುಂತಾ ದವರು ಅಂತರ್ಜಾಲದಲ್ಲಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ವೆಬ್‌ಸೈಟ್, ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಅಮೆರಿಕದ ತುಂಬೆಲ್ಲಾ ಕನ್ನಡ ಕಲಿ ಶಾಲೆಗಳು ನಡೆಯಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಜತೆಗೆ ಸಲಹೆಗಾರರಾಗಿ ಸೌತ್ ಪ್ರೋರಿಡಾ ಯುನಿವರ್ಸಿಟಿಯ ಡಾ.ಗಿಲ್ ಬೆನ್ ಹೇರುಟ್, ಪ್ರೊಫೆಸರ್ ಕೃಷ್ಣೇಗೌಡ, ಡಾ.ಉದಯ  ಶಂಕರ ಪುರಾಣಿಕ, ಡಾ.ತಳವಾರ್ ಮತ್ತು ಟಿ.ಎಸ್.ನಾಗಾಭರಣ ಅವರ ಅಪಾರ ಕೊಡುಗೆ ಇದೆ. ಯಾವಾಗಲೂ  ಮೊಟ್ಟ ಮೊದಲನೆಯ ಕೆಲಸ ತುಂಬಾ ಕಷ್ಟಕರ. ನಂತರ ಇದನ್ನು ವಿಸ್ತರಣೆ ಮಾಡುವುದು ಸುಲಭ. ಅಮೆರಿಕ ಬಹುದೊಡ್ಡ
ದೇಶವಾಗಿದ್ದು, ಇಲ್ಲಿಯ ಬಹಳಷ್ಟು ದೊಡ್ಡ ಊರುಗಳಲ್ಲಿರುವ ಹೈಸ್ಕೂಲುಗಳಲ್ಲಿ ಕನ್ನಡ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸಲು ಮುಂಬರುವ ದಿನಗಳಲ್ಲಿ ಕನ್ನಡ ಅಕಾಡೆಮಿ ಪ್ರಯತ್ನ ಮಾಡಲಿದೆ. ಅಮೆರಿಕ ಮಾತ್ರವಲ್ಲದೇ ಪ್ರಪಂಚದ ಬೇರೆ ಬೇರೆ ದೇಶಗಳ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಕಲಿಯುವಂತಾಗಲಿ ಎಂದು ಆಶಿಸೋಣ .. ಹಾಗೆಯೇ ಆ ನಿಟ್ಟಿಿನಲ್ಲಿ ನಾವು ದುಡಿಯೋಣ!