Thursday, 19th September 2024

ನ.1ರಂದು ಜಾರ್ಜಿಯಾದಲ್ಲಿ ಕನ್ನಡ ಭಾಷೆ, ರಾಜ್ಯೋತ್ಸವ ದಿನಾಚರಣೆಗೆ ನಿರ್ಧಾರ

ಜಾರ್ಜಿಯಾ: ನವೆಂಬರ್ 1 ಅನ್ನು ಅಮೆರಿಕದ ಜಾರ್ಜಿಯಾದಲ್ಲಿ ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.

ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಿಯಾನ್ ಪಿ ಕೆಂಪ್ ಅವರು ಈ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಕನ್ನಡ ಭಾಷೆ ನಾಡು ನುಡಿಯ ಗುಣಗಾನ ಮಾಡ ಲಾಗಿದೆ.

ಅಟ್ಲಾಂಟಾ ಮೂಲದ ನೃಪತುಂಗ ಕನ್ನಡ ಕೂಟವು ತನ್ನ ಫೇಸ್‌ಬುಕ್ ಪೋಸ್ಟ್‌ ನಲ್ಲಿ ಜಾರ್ಜಿಯಾ ಕನ್ನಡಕ್ಕಾಗಿ ಇಂತಹ ಘೋಷಣೆ ಹೊರಡಿಸಿದ ಯುಎಸ್‌ನಲ್ಲಿ ಮೊದಲ ರಾಜ್ಯವಾಗಿದೆ ಎಂದು ಹೇಳಿದೆ.

ಜಾರ್ಜಿಯಾ ಯುಎಸ್‌ನಲ್ಲಿ ಅತಿ ದೊಡ್ಡ ಭಾರತೀಯ ವಲಸೆಗಾರರನ್ನು ಹೊಂದಿದೆ ಎಂದು ವರದಿಯಾಗಿದೆ. ಜಾರ್ಜಿಯಾದ ಕನ್ನಡಿಗ ಸಮುದಾಯವು ದೊಡ್ಡ ಅಟ್ಲಾಂಟಾ ಪ್ರದೇಶದಲ್ಲಿ ಮೂರು ಸ್ಥಳೀಯ ಶಾಲೆಗಳ ಮೂಲಕ ಮತ್ತು ನೃಪತುಂಗ ಕನ್ನಡ ಕೂಟ ಆಯೋಜಿಸುವ ಕಾರ್ಯಕ್ರಮಗಳ ಮೂಲಕ ಭವಿಷ್ಯದ ಪೀಳಿಗೆಗೆ ತಮ್ಮ ಭಾಷೆಯಲ್ಲಿ ಶಿಕ್ಷಣ ನೀಡುತ್ತಿದೆ. ಜೊತೆಗೆ ಜಾರ್ಜಿಯಾ ಶಿಕ್ಷಣ ಇಲಾಖೆ ಯಿಂದ ಪಾರಂಪರಿಕ ಭಾಷೆಗಳಲ್ಲಿ ಬಿಲಿಟರಸಿ ಸೀಲ್ ಔಟ್ರೀಚ್ ನೊಂದಿಗೆ ಕನ್ನಡ ಭಾಷೆ ಗುರುತಿಸಲ್ಪಟ್ಟಿದೆ.

ಜಾರ್ಜಿಯಾ ಸುಮಾರು 2,000 ಕನ್ನಡ ಮಾತನಾಡುವ ಕುಟುಂಬಗಳಿಗೆ ನೆಲೆಯಾಗಿದೆ. ಸುಮಾರು 500 ಸದಸ್ಯರನ್ನು ಹೊಂದಿ ರುವ ನೃಪತುಂಗ ಕನ್ನಡ ಕೂಟವು ಕಳೆದ ಐದು ದಶಕಗಳಿಂದ ಈ ಪ್ರದೇಶದಲ್ಲಿ ಅತ್ಯಂತ ಸಕ್ರಿಯ ಕನ್ನಡ ಭಾಷಾ ಮತ್ತು ಸಾಂಸ್ಕೃತಿಕ ಗುಂಪಾಗಿದೆ. ಕನ್ನಡಿಗ ಸಮುದಾಯವು ವೈದ್ಯಕೀಯ, ಇಂಜಿನಿಯರಿಂಗ್, ಸಂಶೋಧನೆ, ಕಾನೂನು, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ರಾಜ್ಯಕ್ಕೆ ಕೊಡುಗೆ ನೀಡುವುದರ ಜೊತೆಗೆ ಜಾರ್ಜಿಯಾದ ಆರ್ಥಿಕತೆಯನ್ನು ಶ್ರೀಮಂತ ಗೊಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಗೆ ಅಮೆರಿಕದಲ್ಲಿ ರಾಜ್ಯ ಮಟ್ಟದಲ್ಲಿ ಗೌರವ ಸಿಕ್ಕಿರುವುದು ಇದೇ ಮೊದಲು. ಇದು ಜಗತ್ತಿನ ಎಲ್ಲಾ ಕನ್ನಡಿಗರು ಹೆಮ್ಮೆ ಪಡುವ ವಿಷು. ಬಹುಕಾಲ ಉಳಿದಿರುವ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಇದೊಂದು ದೊಡ್ಡ ಗೆಲುವು ಎಂದು ಕೂಟದ ಸದಸ್ಯ ಹಾಗು ಹಿರಿಯ ಡೇಟಾ ಅನಾಲಿಟಿಕ್ಸ್ ಮ್ಯಾನೇಜರ್ ಭರತ್ ತೇಜಸ್ವಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *