ದುಬೈ: ಕನ್ನಡಿಗರ ಕನ್ನಡ ಕೂಟ ದುಬೈ (Kannadigaru Dubai) ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ಮತ್ತು ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 9ರಂದು ದುಬೈಯ ಕ್ರೆಸೆಂಟ್ ಇಂಗ್ಲಿಷ್ ಸ್ಕೂಲ್ ಅಲ್ ಕ್ವಾಸಿಸ್ ಸಭಾಂಗಣದಲ್ಲಿ ಅದ್ಧೂಯಾಗಿ ನಡೆಯಿತು. ದುಬೈ ಕನ್ನಡಿಗರ ಕನ್ನಡ ಕೂಟದ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದರು ಮತ್ತು ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ದಂಪತಿ ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಕನ್ನಡ ರತ್ನ’ ಪ್ರಶಸ್ತಿ ಸ್ವೀಕರಿಸಿದರು.
ಬಳಿಕ ಡಾ. ಸಿ.ಎನ್. ಮಂಜುನಾಥ್ ಅವರು ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆರೋಗ್ಯ, ಆಹಾರ, ಸಂಬಂಧಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಪ್ರತಿ ವರ್ಷ ಗಲ್ಫ್ ರಾಷ್ಟ್ರಗಳ ಅದ್ಭುತ ಸಮಾಜ ಸೇವಕರನ್ನು ಗುರುತಿಸಿ ದುಬೈ ಕನ್ನಡಿಗರಿಂದ ನೀಡುವ ಅಂತಾರಾಷ್ಟ್ರೀಯ ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಈ ಬಾರಿ ದುಬೈಯ ಖ್ಯಾತ ಸಮಾಜ ಸೇವಕರಾದ ಬಾಲಕೃಷ್ಣ ಸಾಲಿಯಾನ್ ಅವರಿಗೆ ನೀಡಲಾಯಿತು.
ಸಮಾಜಮುಖಿ ಮತ್ತು ಮಾನವಪರ ಕಾರ್ಯಗಳನ್ನು ಗೌರವಿಸಿ ಛಾಯಾದೇವಿ ಕೃಷ್ಣಮೂರ್ತಿ ಅವರಿಗೆ ಈ ಸಂದರ್ಭದಲ್ಲಿ ಗಲ್ಫ್ ಸಮಾಜಕಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಯುಎಇ ಎನ್ ಆರ್ ಐ ಫೋರಂನ ಪ್ರವೀಣ್ ಶೆಟ್ಟಿ, ಕನ್ನಡ ಭವನಕ್ಕಾಗಿ ಆಗ್ರಹಿಸಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, ʼʼನಮಗೆ ಕನ್ನಡ ಭವನ ನಿರ್ಮಿಸಲು ಹಣದ ಅವಶ್ಯಕತೆ ಇಲ್ಲ. ಸರ್ಕಾರದ ಮಟ್ಟದಲ್ಲಿ ಅನುಮತಿ ಕೊಡಿಸುವಂತೆ ಕನ್ನಡ ಎನ್‌ಆರ್‌ಐ ಫೋರಂನ ಅಧ್ಯಕ್ಷರಾದ ಡಾ. ಆರತಿ ಕೃಷ್ಣ ಮತ್ತು ಸಂಸದರಾದ ಡಾ. ಸಿ ಎನ್ ಮಂಜುನಾಥ್ ಅವರಿಗೆ ಮನವಿ ಮಾಡಿದರು.
ಡಾ. ಆರತಿ ಕೃಷ್ಣ ಅವರು ಮಾತನಾಡಿ, ಮುಂದಿನ ರಾಜ್ಯೋತ್ಸವದ ವೇಳೆ ಶುಭ ಸುದ್ದಿಯೊಂದಿಗೆ ಮರಳುವುದಾಗಿ ಘೋಷಿಸಿದರು. ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು, ಕನ್ನಡಿಗರು ಕನ್ನಡ ಕೂಟದ ಕಾರ್ಯಗಳನ್ನು ಶ್ಲಾಘಿಸಿ, ಕನ್ನಡ ಭವನ ನಿರ್ಮಾಣಕ್ಕಾಗಿ ಸಾಹಿತ್ಯ ಪರಿಷತ್ ನ ಕಡೆಯಿಂದ ಬೇಕಾದ ರೀತಿಯಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಡಾ. ಬಿ.ಆರ್. ಶೆಟ್ಟಿ, ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಉದ್ಯಮಿ ಅಬ್ದುಲ್ಲಾ, ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ) ನ ನಿಕಟಪೂರ್ವ ಅಧ್ಯಕ್ಷರಾದ ಸಾದನ್ ದಾಸ್, ಕನ್ನಡಿಗರ ಕನ್ನಡ ಕೂಟದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಸುಷ್ಮಾ ಶಂಕರ್ ಅವರ ‘ಭೂತದ ಹಾಡು’ ಪುಸ್ತಕನ್ನು ಲೋಕಾರ್ಪಣೆಗೊಳಿಸಲಾಯಿತು. ಅಂತಾರಾಷ್ಟ್ರೀಯ ಬೈಕ್ ರೇಸರ್ ಐಶ್ವರ್ಯ ಪಿಸ್ಸೆ ಅವರ ಸಾಧನೆಗಾಗಿ ಗೌರವಿಸಲಾಯಿತು.
ದಿವಂಗತ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಕನ್ನಡಿಗರು ದುಬೈ ಸಂಘದ ಸದಸ್ಯರು ಗೌರವ ಸಲ್ಲಿಸಿದರು. ಅವರ ಮಗಳಾದ ಸುಧಾ ನರಸಿಂಹರಾಜು ಅವರು ವಿಡಿಯೊ ಮೂಲಕ ದುಬೈ ಕನ್ನಡಿಗರಿಗೆ ವಂದನೆ ಸಲ್ಲಿಸಿದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ‘ಭೈರತಿ ರಣಗಲ್’ ಚಿತ್ರದ ಟ್ರೈಲರ್ ಅನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದ್ದು ದುಬೈ ಕನ್ನಡಿಗರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.
Poland kannada sangha: ಪೋಲೆಂಡ್ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದೊಂದಿಗೆ ಕನ್ನಡ ಸಂಘ ಉದ್ಘಾಟನೆ ಸಂಭ್ರಮ
ಕಾರ್ಯಕ್ರಮದ ಪ್ರಾಯೋಜಕರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು. ಈ ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಭಾಗಗಳಿಂದ ಸಾವಿರಾರು ಕನ್ನಡಿಗರು ಆಗಮಿಸಿದ್ದರು. ಅಲ್ಲದೇ ಹಲವು ಕಲಾವಿದರು, ಶಾಲಾ ಮಕ್ಕಳು ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನ ನೀಡಿದರು. ರವಿ ಸಂತು ಅವರ ನಿರೂಪಣೆ ಎಲ್ಲರ ಗಮನ ಸೆಳೆಯಿತು.