Sunday, 15th December 2024

Karachi Airport Explosion: ಪಾಕಿಸ್ತಾನದಲ್ಲಿ ಭೀಕರ ಸ್ಫೋಟ; ಇಬ್ಬರು ಚೀನಿ ನಾಗರಿಕರು ಬಲಿ

Karachi Airport Explosion

ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣ (Karachi Airport)ದ ಹೊರಗೆ ಭಾನುವಾರ (ಅಕ್ಟೋಬರ್‌ 6) ತಡರಾತ್ರಿ ಸ್ಫೋಟ ಸಂಭವಿಸಿ ಇಬ್ಬರು ಚೀನಿ ಪ್ರಜೆಗಳು ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಪಾಕಿಸ್ತಾನ ಪ್ರಜೆಗಳೂ ಸೇರಿದ್ದಾರೆ. ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಈ ಸ್ಫೋಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Karachi Airport Explosion).

ಪ್ರಾಥಮಿಕ ಮಾಹಿತಿ ಪ್ರಕಾರ ತೈಲ ಟ್ಯಾಂಕರ್‌ ಸ್ಫೋಟಗೊಂಡಿದೆ ಎನ್ನಲಾಗಿದೆ. ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಅಜ್ಫರ್ ಮಹೇಸರ್‌ ಹೇಳಿದ್ದಾರೆ. “ಪ್ರಾಥಮಿಕ ಮಾಹಿತಿಯ ಪ್ರಕಾರ, ತೈಲ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದು ಇತರ ಹಲವು ವಾಹನಗಳಿಗೆ ಹರಡಿದೆ. ಮೇಲ್ನೋಟಕ್ಕೆ ಇದು ಭಯೋತ್ಪಾದಕ ದಾಳಿಯಂತೆ ಕಾಣಿಸುತ್ತಿದ್ದು, ಸೂಕ್ತ ತನಿಖೆ ನಡೆಸುತ್ತೇವೆʼʼ ಎಂದು ಹೇಳಿದ್ದಾರೆ.

ಹೊಣೆ ಹೊತ್ತ ಬಲೂಚ್‌ ಲಿಬರೇಷನ್‌ ಆರ್ಮಿ

ಪ್ರತ್ಯೇಕತಾವಾದಿ ಗುಂಪು ಬಲೂಚ್‌ ಲಿಬರೇಷನ್‌ ಆರ್ಮಿ (Baloch Liberation Army) ದಾಳಿಯ ಹೊಣೆ ಹೊತ್ತುಕೊಂಡಿದೆ. ಎಂಜಿನಿಯರ್‌ಗಳು ಸೇರಿದಂತೆ ಚೀನಾದ ಪ್ರಜೆಗಳನ್ನು ಸಾಗಿಸುವ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನ ಪ್ರಾಂತ್ಯವನ್ನು ಸ್ವಾತಂತ್ರಗೊಳಿಸಲು ಬಿಎಲ್‌ಎ ಹೋರಾಟ ನಡೆಸುತ್ತಿದೆ. ಆಗಸ್ಟ್‌ನಲ್ಲಿ ನಡೆಸಿದ ದಾಳಿಯಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರ ಕಚೇರಿ ಈ ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ಕರೆದಿದೆ ಮತ್ತು ಪೋರ್ಟ್ ಖಾಸಿಮ್ ಎಲೆಕ್ಟ್ರಿಕ್ ಪವರ್ ಕಂಪನಿಯ ಬೆಂಗಾವಲು ವಾಹನದ ಮೇಲೆ ವಿಮಾನ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ. ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದೆ.

“ಪಾಕಿಸ್ತಾನದಲ್ಲಿರುವ ಚೀನಾದ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ ಈ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಬಹು ಶತಕೋಟಿ ಡಾಲರ್ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (China-Pakistan Economic Corridor) ಯೋಜನೆ ಭಾಗವಾಗಿ ಚೀನಾದ ಕಂಪನಿಗಳು ಸಾವಿರಾರು ಚೀನಿ ಕಾರ್ಮಿಕರನ್ನು ಪಾಕಿಸ್ತಾನದಲ್ಲಿ ನಿಯೋಜಿಸಿದೆ.

ತನಿಖೆ ಆರಂಭ

ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಸ್ಫೋಟ ಸಂಭವಿಸಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕದಳ ಮತ್ತು ಪೊಲೀಸರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಆಜ್ ನ್ಯೂಸ್ ವರದಿ ಮಾಡಿದೆ. ಸ್ಫೋಟಕ್ಕೆ ನಿರ್ದಿಷ್ಟ ಕಾರಣವೇನೆಂದು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡವರಲ್ಲಿ ಪೊಲೀಸರು, ವಿಮಾನ ನಿಲ್ದಾದ ಭದ್ರತಾ ಪಡೆ ಸಿಬ್ಬಂದಿಯೂ ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಘಟನೆಯನ್ನು ಬಲವಾಗಿ ಖಂಡಿಸಿರುವ ಚೀನಾ ಅಪರಾದಿಗಳಿಗೆ ಕಠಿಣ ಸಿಕ್ಷೆ ವಿದಿಸಬೇಕು ಎಂದು ಆಗ್ರಹಿಸಿದೆ.

ಈ ಸುದ್ದಿಯನ್ನೂ ಓದಿ: Israel Airstrike: ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದ ಗಾಜಾ ಮಸೀದಿ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; 18 ಜನ ಬಲಿ