Saturday, 14th December 2024

ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರಾಗಿ ಕಿರಣ್ ಅಹುಜಾ ಆಯ್ಕೆ

ವಾಷಿಂಗ್ಟನ್: ಅಮೆರಿಕದ ಎರಡು ಕೋಟಿ ನೌಕರರನ್ನು ನಿರ್ವಹಿಸುವ, ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರನ್ನಾಗಿ ಭಾರತೀಯ-ಅಮೆರಿಕನ್ ವಕೀಲ ಮತ್ತು ಹಕ್ಕುಗಳ ಹೋರಾಟಗಾರ ಕಿರಣ್ ಅಹುಜಾ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.

ಕಿರಣ್‌ ಅವರು, 2015 ರಿಂದ 2017 ರವರೆಗೆ ಅಮೆರಿಕದ ಸಿಬ್ಬಂದಿ ನಿರ್ವಹಣಾ ನಿರ್ದೇಶಕರ ಕಚೇರಿಯ ಸಿಬ್ಬಂದಿಯ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದ್ದರು. ಎರಡು ದಶಕಗಳಿಗಿಂತಲೂ ಹೆಚ್ಚು ಸಾರ್ವಜನಿಕ ಸೇವೆ ಮತ್ತು ಲಾಭರಹಿತ/ ಸಾಮಾಜಿಕ ಸೇವಾ ವಲಯದಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ನಾಗರಿಕ ಹಕ್ಕುಗಳ ವಕೀಲರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 2003 ರಿಂದ 2008 ರವರೆಗೆ, ಕಿರಣ್‌ ಅಹುಜಾ ಅವರು ನ್ಯಾಷನಲ್ ಏಷ್ಯನ್ ಪೆಸಿಫಿಕ್ ಅಮೆರಿಕನ್ ವುಮೆನ್ಸ್ ಫೋರಂನ ಸ್ಥಾಪಕ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.