ಬೈರೂತ್: ಲೆಬನಾನ್‌ನ ಮೇಲೆ ದಾಳಿ (Lebanon-Israel war) ಮುಂದುವರಿಸಿರುವ ಇಸ್ರೇಲ್ ಸೈನ್ಯ, ಸೋಮವಾರ ರಾತ್ರಿಯಿಂದ ನೆಲದ ಮೇಲೆ ನಿಖರ ದಾಳಿಗಳನ್ನು ಆರಂಭಿಸಿದೆ. ಅಡಗಿ ಕುಳಿತಿರುವ ಹೆಜ್ಬೊಲ್ಲಾ (Hezbollah) ಉಗ್ರರನ್ನು ಆ ಮೂಲಕ ಹೊಡೆದುಹಾಕಲು ಮುಂದಾಗಿದೆ.
ಸಂಯಮಕ್ಕಾಗಿ ಅಂತಾರಾಷ್ಟ್ರೀಯ ಮನವಿಗಳ ಹೊರತಾಗಿಯೂ ಇಸ್ರೇಲ್ ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿಗಳನ್ನು ಸಂಘಟಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, “ಹೆಜ್ಬೊಲ್ಲಾ ಭಯೋತ್ಪಾದಕ ನೆಲೆಗಳ ಬಗ್ಗೆ ನಿಖರವಾದ ಗುಪ್ತಚರ ಮಾಹಿತಿಗಳ ಮೇಲೆ ದಕ್ಷಿಣ ಲೆಬನಾನ್‌ನಲ್ಲಿ ದಾಳಿಗಳನ್ನು ನಡೆಸಲಾಗಿದೆ” ಎಂದಿವೆ.
ಈ ವರೆಗೆ ಲೆಬನಾನ್‌ನ ಬೈರುತ್‌ನ ಹೊರವಲಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಇಸ್ರೇಲ್ ಸೇನೆ, ಮೊದಲ ಬಾರಿಗೆ ಬೈರುತ್‌ನ ಕೇಂದ್ರ ಭಾಗದ ಮೇಲೆ ದಾಳಿಯನ್ನು ಆರಂಭಿಸಿದೆ. ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯ ಬಳಿಕ ಇಸ್ರೇಲ್ ತನ್ನ ಯುದ್ಧ ತಂತ್ರ ಬದಲಿಸಿದೆ.
ರವಿವಾರ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ 105 ಜನರು ಮೃತಪಟ್ಟು 359ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರೆ, ಸೋಮವಾರದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆಂದು ಲೆಬನಾನ್ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷದ ಅ.7ರ ಇಸ್ರೇಲ್ ಮೇಲಿನ ಹಮಾಸ್ ದಾಳಿ ಬಳಿಕ ಲೆಬನಾನ್-ಇಸ್ರೇಲ್ ಗಡಿ ಮುಚ್ಚಲಾಗಿತ್ತು. ಇದೇ ವೇಳೆ, ಹೌತಿ ಉಗ್ರರನ್ನೂ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಪ್ರತಿಯಾಗಿ ಹೌತಿಯೂ ಇಸ್ರೇಲ್‌ನ ವಿಮಾನ ನಿಲ್ದಾಣ ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ.
ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಪ್ರತೀಕಾರದ ಮಾತುಗಳನ್ನಾಡಿರುವ ಹೆಜ್ಬುಲ್ಲಾ ಉಪ ನಾಯಕ ನಯೀಂ ಕಾಸೇಮ್, ಇಸ್ರೇಲ್ ಏನಾದರೂ ಭೂ ದಾಳಿಗೆ ಮುಂದಾದರೆ ಅದನ್ನು ಎದುರಿಸಲು ಹೆಜ್ಬುಲ್ಲಾ ಹೋರಾಟಗಾರರು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಶುಕ್ರವಾರ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಕೊಂದ ನಂತರ ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪಿನ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್ ಮತ್ತಷ್ಟು ವಿಸ್ತರಿಸಿದೆ. ಯುಎಸ್, ಯುರೋಪಿಯನ್ ಒಕ್ಕೂಟ ಮತ್ತು ಅರಬ್ ದೇಶಗಳು ಕದನ ವಿರಾಮಕ್ಕೆ ಕರೆ ನೀಡಿದ್ದರೂ, ಇಸ್ರೇಲ್ ಅದನ್ನು ಮಾನ್ಯ ಮಾಡಿಲ್ಲ. ಇಸ್ರೇಲ್ ತನ್ನ ಗಮನವನ್ನು ಲೆಬನಾನ್‌ನತ್ತ ಹರಿಸಿದ್ದು, ಸದ್ಯ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ನಡೆಯುತ್ತಿದ್ದ ಯುದ್ಧವನ್ನು ಸ್ಥಗಿತಗೊಳಿಸಿದೆ.
“ಐಡಿಎಫ್ ಜನರಲ್ ಸ್ಟಾಫ್ ಮತ್ತು ನಾರ್ದರ್ನ್ ಕಮಾಂಡ್ ನಿಗದಿಪಡಿಸಿದ ಕ್ರಮಬದ್ಧ ಯೋಜನೆಯ ಪ್ರಕಾರ ಐಡಿಎಫ್ ಸೈನಿಕರು ನಡೆಯುತ್ತಿದ್ದಾರೆ. ಇಸ್ರೇಲಿ ಏರ್ ಫೋರ್ಸ್ ಮತ್ತು ಐಡಿಎಫ್ ಆರ್ಟಿಲರಿಗಳು ಈ ಪ್ರದೇಶದಲ್ಲಿ ನಿಖರವಾದ ದಾಳಿಯೊಂದಿಗೆ ಭೂಸೇನಾ ಪಡೆಗಳನ್ನು ಬೆಂಬಲಿಸುತ್ತಿವೆ” ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Lebanon-Israel war: ಇಸ್ರೇಲ್‌ನಿಂದ ಮತ್ತೊಂದು ಭರ್ಜರಿ ಬೇಟೆ- 48 ಗಂಟೆಗಳಲ್ಲಿ ಮತ್ತೊಬ್ಬ ಹೆಜ್ಬುಲ್ಲಾ ಕಮಾಂಡರ್ ಹತ್ಯೆ