Monday, 11th November 2024

Lebanon Pager Explosions: ಹೆಜ್ಬೊಲ್ಲಾ ಉಗ್ರರ ಪೇಜರ್‌ ಸ್ಫೋಟಿಸಿದಂತೆ ನಮ್ಮ ಸ್ಮಾರ್ಟ್‌ಫೋನ್‌ಗಳನ್ನೂ ಸ್ಫೋಟಿಸಬಹುದೆ?

Lebanon Pager Explosions

ಲೆಬೆನಾನಿನ ಸಶಸ್ತ್ರ ಗುಂಪಿಗೆ (Lebanese armed group) ಸಂದೇಶಗಳನ್ನು ಕಳುಹಿಸುವ ಸಣ್ಣ ರೇಡಿಯೋ ಸಾಧನವಾದ ನೂರಾರು ಪೇಜರ್‌ಗಳು (Lebanon Pager Explosions) ಬುಧವಾರ ಏಕಕಾಲಕ್ಕೆ ಸ್ಫೋಟಗೊಂಡು ಒಂಬತ್ತು ಮಂದಿ ಸತ್ತು 2,750ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿದೆ. ಮುಂದೆ ಹೀಗೆಯೇ ಸ್ಮಾರ್ಟ್‌ಫೋನ್‌ಗಳು (Phone Explosion) ಕೂಡ ಸ್ಫೋಟಗೊಳ್ಳಬಹುದೇ ಎನ್ನುವ ಆತಂಕ ಶುರುವಾಗಿದೆ.

ಕೇಂದ್ರ ಆಪರೇಟರ್ ದೂರವಾಣಿ ಮೂಲಕ ನಿರ್ವಹಿಸಲಾಗುವ ಪೇಜರ್‌ಗಳ ಮೂಲಕ ಲೆಬೆನಾನಿನ ಉಗ್ರ ಸಶಸ್ತ್ರ ಪಡೆಯಾದ ಹೆಜ್ಬೊಲ್ಲಾಗೆ ತುರ್ತು ಸಂದೇಶಗಳನ್ನು ಕಳುಹಿಸಲಾಗುತ್ತಿತ್ತು. ಮೊಬೈಲ್ ಫೋನ್‌ಗಳಿಗಿಂತ ಭಿನ್ನವಾಗಿರುವ ಈ ಪೇಜರ್‌ಗಳಲ್ಲಿ ಸಂವಹನಕ್ಕಾಗಿ ರೇಡಿಯೊ ತರಂಗಗಳನ್ನು ಬಳಸಲಾಗುತ್ತಿತ್ತು.

ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ರ ಸುಮಾರಿಗೆ ಸ್ಫೋಟಗಳು ಉಂಟಾಗಿವೆ. ಇದು ವಿವಿಧ ಘಟಕಗಳು ಮತ್ತು ಸಂಸ್ಥೆಗಳ ಮೇಲೆ ಚಟುವಟಿಕೆಯ ಮೇಲೆ ಪರಿಣಾಮ ಬೀರಿತ್ತು. ಸ್ಫೋಟಗಳು ಒಂದು ಗಂಟೆಗೂ ಹೆಚ್ಚು ಕಾಲ ಮುಂದುವರಿದಿದ್ದು, ವ್ಯಾಪಕ ಭೀತಿ ಮತ್ತು ವಿನಾಶಕ್ಕೆ ಕಾರಣವಾಯಿತು ಎಂದು ಹೆಜ್ಬೊಲ್ಲಾ ಅಧಿಕಾರಿಗಳು ಹೇಳಿದ್ದರು.

ಪೇಜರ್‌ಗಳು ಸ್ಫೋಟಗೊಂಡಿದ್ದು ಏಕೆ?

ಹೆಜ್ಬೊಲ್ಲಾ ಭದ್ರತಾ ಅನುಕೂಲಕ್ಕಾಗಿ ಈ ಪೇಜರ್‌ಗಳನ್ನು ಬಳಸಲಾಗುತ್ತಿತ್ತು. ಆಧುನಿಕ ಸ್ಮಾರ್ಟ್‌ಫೋನ್‌ಗಳಿಗಿಂತ ಇದು ಭಿನ್ನವಾಗಿದೆ. ಇದರಲ್ಲಿ ಕೆಲವೇ ಕೆಲವು ಯಂತ್ರಗಳು ಮತ್ತು ಅಗತ್ಯ ತಂತ್ರಜ್ಞಾನವನ್ನು ಮಾತ್ರ ಬಳಸಲಾಗುತ್ತದೆ. ಇದರಿಂದಾಗಿ ಅವುಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಪರಿಶೀಲನೆ ಮಾಡುವುದು ಯಾರಿಗೂ ಸಾಧ್ಯವಿಲ್ಲ. ಸಂವಹನ ಮತ್ತು ಭದ್ರತೆ ಎರಡಕ್ಕೂ ಆದ್ಯತೆ ನೀಡುವ ಹೆಜ್ಬೊಲ್ಲಾನಂತಹ ಗುಂಪಿಗೆ ಇದು ಮುಖ್ಯವಾದ ಸಾಧನವಾಗಿದೆ.

ಸೆಲ್‌ಫೋನ್‌ಗಳನ್ನು ಬಳಕೆ ಮಾಡುವ ಬಗ್ಗೆ ಸಶಸ್ತ್ರ ಗುಂಪಿಗೆ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಅವರು ಇಸ್ರೇಲ್ ಕಣ್ಗಾವಲು ಸಾಮರ್ಥ್ಯವನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ಈ ಹಿಂದೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆಜ್ಬೊಲ್ಲಾಹ್‌ ಹೆಚ್ಚು ಸುರಕ್ಷಿತ ಸಂವಹನ ಸಾಧನವಾಗಿ ಪೇಜರ್‌ಗಳನ್ನು ಬಳಸಲು ಪ್ರಾರಂಭಿಸಿತ್ತು.

Lebanon Pager Explosions

ಸ್ಫೋಟಕ್ಕೆ ಕಾರಣ ಏನು?

ಪೇಜರ್ ಗಳ ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತನಿಖೆಯಾಗಬೇಕಿದೆ. ಆದರೆ ಡಿಜಿಟಲ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ. ಡಿಜಿಟಲ್ ಹ್ಯಾಕ್‌ನಿಂದ ಬ್ಯಾಟರಿ ತಾಪ ಹೆಚ್ಚಾಗಿ ಸ್ಫೋಟವಾಗಿರಬಹುದು ಎನ್ನುತ್ತಾರೆ ಕೆಲವು ತಜ್ಞರು.

ಸಣ್ಣ ಸ್ಫೋಟಕ ಸಾಧನಗಳನ್ನು ಪೇಜರ್‌ಗಳ ತಯಾರಿಕೆ ಅಥವಾ ವಿತರಣೆಯ ಸಮಯದಲ್ಲಿ ಸೇರಿಸುವ ಸಾಧ್ಯತೆಯೂ ಇದೆ. ಬಳಿಕ ಇದು ದೂರದಿಂದಲೇ ರೇಡಿಯೋ ಸಿಗ್ನಲ್ ಬಳಸಿ ಏಕಕಾಲದಲ್ಲಿ ಸ್ಫೋಟಗೊಳ್ಳುವಂತೆ ಮಾಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅಥವಾ ದೂರದಿಂದ ವಿದ್ಯುತ್ ಪ್ರವಾಹದಲ್ಲಿ ವ್ಯತ್ಯಾಸ ಉಂಟಾಗಿ ಸಾಧನಗಳು ಹೆಚ್ಚು ಬಿಸಿಯಾಗಿ ಸ್ಫೋಟಗೊಂಡಿರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಹಲವು ಭದ್ರತಾ ತಜ್ಞರು.

ಫೋನ್ ಕೂಡ ಸ್ಫೋಟಗೊಳ್ಳಬಹುದೇ?

ಹೆಜ್ಬೊಲ್ಲಾ ಪೇಜರ್‌ಗಳ ಸ್ಫೋಟ ಪ್ರಕರಣದಿಂದ ಈಗ ಸ್ಮಾರ್ಟ್‌ಫೋನ್‌ ಬಳಸುವವರಲ್ಲೂ ಆತಂಕಕ್ಕೆ ಕಾರಣವಾಗಿದೆ. ಪೇಜರ್ ಸ್ಫೋಟ ಪ್ರಕರಣ ಲಿಥಿಯಂ- ಐಯಾನ್ ಬ್ಯಾಟರಿಗಳಿಗೆ ಸಂಬಂಧಿಸಿದ ಅಪಾಯವನ್ನು ತೋರಿಸಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಇದೆ ರೀತಿಯ ದಾಳಿ ನಡೆದರೆ ಅಚ್ಚರಿ ಏನಿಲ್ಲ.
ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಸ್ಫೋಟಕ್ಕೆ ಹಲವು ಅಂಶಗಳು ಕಾರಣವಾಗುತ್ತದೆ. ಅತಿಯಾದ ಶಾಖ, ಉತ್ಪಾದನೆಯಲ್ಲಿ ತೊಂದರೆ, ಬ್ಯಾಟರಿ ಅಥವಾ ಫೋನ್‌ಗೆ ಆಗುವ ಹಾನಿಯಿಂದಲೂ ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಆದರೆ ಸ್ಮಾರ್ಟ್‌ ಫೋನ್‌ಗಳಲ್ಲಿರುವ ಬ್ಯಾಟರಿಯನ್ನೇ ಬಳಸಿಕೊಂಡು, ಅವುಗಳು ವಿಪರೀಟ್‌ ಹೀಟ್‌ ಆಗುವಂತೆ ಮಾಡಿ ಸ್ಫೋಟ ಆಗುವಂತೆ ಮಾಡುವ ಸಾಧ್ಯತೆ ಇದ್ದೇ ಇದೆ!

Lebanon Pager Explosions: ಲೆಬನಾನ್‌ ಪೇಜರ್‌ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡ? ಹೆಜ್ಬುಲ್ಲಾ ಹೇಳಿದ್ದೇನು?

ಸ್ಮಾರ್ಟ್‌ಫೋನ್‌ಗಳು ಸ್ಫೋಟವಾಗದಂತೆ ಎಚ್ಚರಿಕೆ ವಹಿಸುವುದು ಬಹುಮುಖ್ಯ. ಇದಕ್ಕಾಗಿ ಸ್ಮಾರ್ಟ್‌ಫೋನ್‌ಗಳಿಗೆ ಅಧಿಕೃತ ಚಾರ್ಜರ್‌ಗಳನ್ನು ಬಳಸಿ, ಫೋನ್ ಅನ್ನು ಅತಿಯಾದ ಶಾಖ ಅಥವಾ ಶೀತದಿಂದ ದೂರವಿರಿಸಿ, ಬ್ಯಾಟರಿ ತೊಂದರೆಗಳ ಬಗ್ಗೆ ಗಮನ ಕೊಡಿ, ಬ್ಯಾಟರಿ ಹಳೆಯದಾಗಿದ್ದರೆ ಗುಣಮಟ್ಟದ ಬ್ಯಾಟರಿಯನ್ನು ಅಳವಡಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು.