ಮಾಲೆ: ಮಾಲ್ಡೀವ್ಸ್ ರಾಜಧಾನಿಯ ಮೇಯರ್ ಚುನಾವಣೆಯಲ್ಲಿ ಪ್ರಮುಖ ವಿಪಕ್ಷ ಹಾಗೂ ಭಾರತ ಪರ ನಿಲುವಿಗೆ ಹೆಸರಾದ ಮಾಲ್ಡೀವನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಭರ್ಜರಿ ಜಯ ಸಾಧಿಸಿದೆ.
ಎಂಡಿಪಿ ಅಭ್ಯರ್ಥಿ ಅದಾಮ್ ಅಝೀಂ ಅವರು ಮಾಲೆಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನವರೆಗೂ ಮುಯಿಝ್ಝು ಈ ಹುದ್ದೆ ಯಲ್ಲಿದ್ದರು. ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಝೀಂ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಮಾಲ್ಡೀವ್ಸ್ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ಭಾರತ ಪರ ನಿಲುವಿಗೆ ಹಸರಾದ ಮುಹಮ್ಮದ್ ಸ್ವಾಲಿಹ್ ನೇತೃತ್ವದ ಎಂಡಿಪಿಯನ್ನು ಸೋಲಿಸಿ ಚೀನಾ ಪರ ವಿಚಾರ ಧಾರೆಯ ಮುಯಿಝ್ಝು ಅವರ ಪಕ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿತ್ತು.
ಮೇಯರ್ ಚುಣಾವಣೆಯ 41 ಮತಪೆಟ್ಟಿಗೆಗಳ ಎಣಿಕೆ ಕಾರ್ಯ ಮುಗಿದಿದ್ದು, ಅಝೀಂ 5303 ಮತಗಳನ್ನು ಪಡೆದು ಅಗಾಧ ಮುನ್ನಡೆ ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಆಯಿಶತ್ ಅಝೀಮಾ ಶಕೂರ್ ಕೇವಲ 3301 ಮತಗಳನ್ನು ಗಳಿಸಿದ್ದಾರೆ.