Thursday, 12th December 2024

ಚೋಕ್ಸಿ ಜಾಮೀನು ಅರ್ಜಿ ವಿಚಾರಣೆ ಜೂ.11ಕ್ಕೆ ಮುಂದೂಡಿಕೆ

ನವದೆಹಲಿ: ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಜೂ.11ಕ್ಕೆ ಮುಂದೂಡಿದೆ.

ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದ ಬಳಿಕ ಚೋಕ್ಸಿ ಹೈಕೋರ್ಟ್ ಮೊರೆ ಹೋಗಿದ್ದರು. ಚೋಕ್ಸಿಯ ಕಾನೂನು ತಂಡದಲ್ಲಿರುವ ಜೂಲಿಯನ್ ಪ್ರಿವೊಸ್ಟ್, ವೇಯ್ನ್ ನಾರ್ಡೆ, ವೇಯ್ನ್ ಮಾರ್ಷೆ ಮತ್ತು ಕ್ಯಾರಾ ಶಿಲ್ಲಿಂಗ್‌ಫೋರ್ಡ್ ಮಾರ್ಷ್ ಅವರ ಮನವಿ ಮೇರೆಗೆ ಹೈಕೋರ್ಟ್ ನ್ಯಾಯಾಧೀಶ ವಿನಾಂಟೆ ಆಡ್ರಿಯನ್ ರಾಬರ್ಟ್ಸ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಚೋಕ್ಸಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದರು. ಚೋಕ್ಸಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿದ್ದ ಚೋಕ್ಸಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದು ನೆಲೆಸಿದ್ದರು. ಬಳಿಕ ಅಲ್ಲಿಂದ ತಪ್ಪಿಸಿ ಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು.

ಆಂಟಿಗುವಾದಿಂದ ಡೊಮಿನಿಕಾಗೆ ನನ್ನನ್ನು ಅಪಹರಣ ಮಾಡಿ ಕರೆದೊಯ್ದಿದ್ದರ ಹಿಂದೆ ನನ್ನ ಪ್ರೇಯಸಿ ಬಾರ್ಬರಾ ಜರಾಬಿಕಾ ಕೈವಾಡವಿದೆ ಎಂದು ಚೋಕ್ಸಿ ಆರೋಪಿಸಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು ₹14,000 ಕೋಟಿ ವಂಚಿಸಿದ ಆರೋಪ ಚೋಕ್ಸಿ ಮೇಲಿದೆ.