ವಾಷಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಏರ್ ಶೋ ವೇಳೆ ವಿಮಾನ ಪತನ ಗೊಂಡಿದೆ. ಇಬ್ಬರು ಪೈಲಟ್ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ವಿಮಾನ ಅಪಾರ್ಟ್ಮೆಂಟ್ವೊಂದರ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ನಾಶವಾಗಿದೆ.
ಮಿಚಗನ್ನಲ್ಲಿ ವಿಮಾನ ಹಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಹಲವು ಜೆಟ್ಗಳು ಆಕಾಶದಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದವು. ಈ ವೇಳೆ ಮಿಗ್-23 ಜೆಟ್ ಹಾರಾಟ ನಡೆಸುತ್ತಿದ್ದಾಗ ಅಚಾನಕ್ಕಾಗಿ ತಾಂತ್ರಿಕ ಸಮಸ್ಯೆಗೆ ಸಿಲುಕಿದೆ. ಪೈಲಟ್ಗಳು ಜೆಟ್ ಅನ್ನು ಲ್ಯಾಂಡಿಂಗ್ ಮಾಡಲು ಯತ್ನಿಸಿದರೂ, ಅದು ಹಿಡಿತಕ್ಕೆ ಸಿಕ್ಕಿಲ್ಲ. ಪತನದ ಸುಳಿವು ಸಿಕ್ಕಾಗ ಅವರು ವಿಮಾನದಿಂದ ಹಾರಿದ್ದಾರೆ.
ವಿಮಾನ ಹೊಯ್ದಾಡುತ್ತಾ ಭೂಮಿ ಕಡೆ ರಭಸವಾಗಿ ಬರುತ್ತಿದ್ದಾಗ ಪೈಲಟ್ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಎಜೆಕ್ಟ್ ಆಗಿದ್ದಾರೆ. ನಗರದ ಸಮೀಪದ ಬೆಲ್ಲೆವಿಲ್ಲೆ ಸರೋವರದಲ್ಲಿ ಅವರು ಲ್ಯಾಂಡ್ ಆಗಿದ್ದಾರೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಿಳಿಸಿದೆ. ಇಬ್ಬರು ಪೈಲಟ್ಗಳನ್ನು ರಕ್ಷಿಸಲಾಗಿದೆ. ಅವರು ಯಾವುದೇ ಗಂಭೀರ ಗಾಯಗೊಂಡಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೇಯ್ನ್ ಕೌಂಟಿ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ತಾಂತ್ರಿಕ ಸಮಸ್ಯೆಯಿಂದ ವಿಮಾನ ನಗರದ ಅಪಾರ್ಟ್ಮೆಂಟ್ವೊಂದರ ಬಳಿಕ ಪತನವಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಅದು ಬಿದ್ದ ಕಾರಣ ಹಲವು ವಾಹನಗಳು ಹಾನಿಗೀಡಾಗಿವೆ. ಅಲ್ಲದೇ ಸ್ಥಳದಲ್ಲಿದ್ದ ಕಾವಲು ಸಿಬ್ಬಂದಿಯೊಬ್ಬರು ಕೂಡ ಗಾಯಗೊಂಡಿದ್ದಾರೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಪತನದಿಂದ ಆತಂಕದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏರ್ ಶೋವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.