ನವದೆಹಲಿ: ಕೆನಡಾದಲ್ಲಿ ಕೇಂದ್ರ ಗೃಹ ಸಚಿವ (Home Minister) ಅಮಿತ್ ಶಾ (Amit Shah) ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕೆನಡಾ (Canada) ಮಾಡಿದ್ದ ಆರೋಪವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ವಿದೇಶಾಂಗ ಇಲಾಖೆಯ (ministry of external affairs) ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) ಪ್ರತಿಕ್ರಿಯಿಸಿದ್ದು, ಕೆನಡಾ ಹೈಕಮಿಷ್‌ನರ್ ಕರೆಸಿ ಮಾತನಾಡಿದ್ದೇವೆ. ಕೆನಡಾ ಸರ್ಕಾರಕ್ಕೆ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಸ್ಥಾಯಿ ಸಮಿತಿಯ ಪ್ರಕ್ರಿಯೆಗಳನ್ನು ಉಲ್ಲೇಖಿಸಿ ರಾಜತಾಂತ್ರಿಕ ಟಿಪ್ಪಣಿಯನ್ನು ಹಸ್ತಾಂತರಿಸಲಾಗಿದೆ” ಎಂದು ಹೇಳಿದ್ದಾರೆ.
ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಅವರು ಮಾಡಿದ್ದ ಆಧಾರ ರಹಿತ ಆರೋಪವನ್ನು ಭಾರತ ಖಂಡಿಸುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳು ದ್ವಿಪಕ್ಷೀಯ ಸಂಬಂಧಗಳಿಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಅವರು ಕೆನಡಾಗೆ ಎಚ್ಚರಿಕೆ ನೀಡಿದ್ದಾರೆ.
Starting shortly!
— Randhir Jaiswal (@MEAIndia) November 2, 2024
Tune in for our Weekly Media Briefing:https://t.co/QNwIRYDrnv
ಕೆನಡಾದ ಆರೋಪವೇನು?
ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಕೈಗೊಳ್ಳಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್ ಶಾ ಆದೇಶಿಸಿದ್ದರು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಆರೋಪಿಸಿದ್ದರು. ಅವರು, ಸಂಸತ್ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿಗೆ ಮಾಹಿತಿ ನೀಡಿದ್ದು, ಈ ವಿಷಯದ ಕುರಿತ ಆರೋಪಗಳ ವರದಿಯನ್ನು ಮೊದಲ ಬಾರಿಗೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಪ್ರಕಟಿಸಿತ್ತು. ಆ ಪತ್ರಿಕೆಯ ವರದಿಗಾರನಿಗೆ ಈ ವಿಷಯವನ್ನು ನಾನೇ ಖಚಿತಪಡಿಸಿದ್ದೆ’ ಎಂದು ಮಾರಿಸನ್ ಹೇಳಿದ್ದರು. ವರದಿಗಾರ ಕರೆ ಮಾಡಿ ಅದು ಆ ವ್ಯಕ್ತಿಯೇ ಎಂದು ಕೇಳಿದ್ದ ನಾನು ಹೌದು ಅದೇ ವ್ಯಕ್ತಿ ಎಂದು ಹೇಳಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Gursimran Kaur: ಕೆನಡಾದಲ್ಲಿ ವಾಲ್‌ಮಾರ್ಟ್ ಓವನ್‌ನೊಳಗೆ ಮೃತಪಟ್ಟ ಗುರ್‌ಸಿಮ್ರಾನ್ ಕೌರ್ ಯಾರು? ಏನಿವರ ಹಿನ್ನೆಲೆ?
ಕೆನಡಾ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. 2023ರ ಜೂನ್‌ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್‌ನ ಕೊಲೆ ಪ್ರಕರಣದ ಬಳಿಕ ಶುರುವಾದ ಬಿಕ್ಕಟ್ಟು, ಈಗ ರಾಯಭಾರ ಅಧಿಕಾರಿಗಳನ್ನು ವಜಾಗೊಳಿಸುವ ಪ್ರತೀಕಾರದ ಹಂತಕ್ಕೆ ತಲುಪಿದೆ. ನಿಜ್ಜಾರ್ ಹತ್ಯೆಯಲ್ಲಿ ಒಟ್ಟಾವದಲ್ಲಿನ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರ ಪಾತ್ರವಿದೆ. ಹೀಗಾಗಿ ಅವರನ್ನು ತನಿಖೆಗೆ ಒಳಪಡಿಸಬೇಕು ಎಂಬ ಕೆನಡಾ ಆರೋಪ ಹೊಸ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಅದಕ್ಕೆ ತಕ್ಕ ತಿರುಗೇಟು ನೀಡಿದ ಭಾರತ ಸರ್ಕಾರ ಹಂಗಾಮಿ ಹೈಕಮಿನಷರ್ ಸೇರಿದಂತೆ ಕೆನಡಾದ ಆರು ರಾಜತಾಂತ್ರಿಕರನ್ನು ವಜಾಗೊಳಿಸಿ, ಶನಿವಾರದ ಒಳಗೆ ಜಾಗ ಖಾಲಿ ಮಾಡುವಂತೆ ಗಡುವು ನೀಡಿತ್ತು. ಇದೀಗ ದ್ವಿಪಕ್ಷೀಯ ರಾಜತಾಂತ್ರಿಕ ಸಭೆ ನಡೆದಿದ್ದು ಕೆನಡಾ ಸರ್ಕಾರಕ್ಕೆ ಭಾರತ ಕೊನೆಯ ಎಚ್ಚರಿಕೆ ನೀಡಿದೆ.