Sunday, 17th November 2024

Narendra Modi : ಮೊದಲ ಬಾರಿಗೆ ನೈಜೀರಿಯಾಗೆ ಪ್ರಧಾನಿ ಮೋದಿ ಭೇಟಿ ; ಭಾರತೀಯ ವಲಸಿಗರಿಂದ ಭವ್ಯ ಸ್ವಾಗತ

Narendra Modi

ಅಬುಜಾ : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಐದು ದಿನದ ವಿದೇಶ ಪ್ರವಾಸದಲ್ಲಿದ್ದು, ನೈಜೀರಿಯಾ (Nigeria) ಬ್ರೆಜಿಲ್‌ ಹಾಗೂ ಗಯಾನಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು (President Bola Ahmed Tinubu) ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಬುಜಾಗೆ ಆಗಮಿಸಿದ್ದು, ಬರೋಬ್ಬರಿ 17 ವರ್ಷದ ನಂತರ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ 2007 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ನೈಜೀರಿಯಾ ಪ್ರವಾಸ ಕೈಗೊಂಡಿದ್ದರು.

ಪ್ರಧಾನಿ ನೈಜೀರಿಯಾಕ್ಕೆ ಆಗಮಿಸುವಾಗ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ದೊರಕಿದೆ. ಅಬುಜಾದಲ್ಲಿ ವಿಮಾನ ಇಳಿಯುತ್ತಿರುವಾಗ ಮೋದಿ, ಮೋದಿ ಎಂಬ ಘೋಷ ವಾಕ್ಯ ಎಲ್ಲೆಡೆ ಮೊಳಗಿತು. ನೈಜೀರಿಯಾದ ಹಾಗೂ ಭಾರತೀಯ ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಪ್ರಧಾನಿಯನ್ನು ಬರಮಾಡಿಕೊಂಡರು.

ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೈಸೋಮ್ ಎಜೆನ್ವೊ ವೈಕ್ ಅವರು ಅಬುಜಾದ ‘ನಗರದ ಕೀ’ ಯನ್ನು ಪ್ರಧಾನ ಮಂತ್ರಿಯವರಿಗೆ ಅರ್ಪಿಸಿದರು. ಈ ಕೀಲಿಯು ನೈಜೀರಿಯಾದ ಜನರು ಪ್ರಧಾನ ಮಂತ್ರಿಯ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವವನ್ನು ಸಂಕೇತಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಎಕ್ಸ್‌ನಲ್ಲಿ ತಡರಾತ್ರಿಯ ಪೋಸ್ಟ್‌ನಲ್ಲಿ ತಿಳಿಸಿದೆ.

ನೈಜೀರಿಯಾ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ ಮೋದಿ

ಭಾರತದ ಪ್ರಧಾನಿಯನ್ನು ಸ್ವಾಗತಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ ನೈಜೀರಿಯಾ ಅಧ್ಯಕ್ಷ ಟಿನುಬು ಅವರ X ನಲ್ಲಿನ ಪೋಸ್ಟ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ದ್ವಿಪಕ್ಷೀಯ ಚರ್ಚೆಗಳು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸಲು ಮತ್ತು ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತವೆ. ನೈಜೀರಿಯಾಕ್ಕೆ ಸ್ವಾಗತ, ಪ್ರಧಾನಿ ಮೋದಿ, ಎಂದು ಟಿನುಬು ತಮ್ಮ ಪೋಸ್ಟ್‌ನಲ್ಲಿ ಬರೆದು ಕೊಂಡಿದ್ದರು.

ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಧನ್ಯವಾದಗಳು, ಅಧ್ಯಕ್ಷ ಟಿನುಬು.. ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆಗಳು. ಈ ಭೇಟಿಯು ನಮ್ಮ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸ್ನೇಹ ಇನ್ನೂ ಗಾಢವಾಗಲಿ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

18-19 ರಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಜಿ-20 ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಇದೀಗ ಈ ಪದ್ಧತಿಯನ್ನು ಬ್ರೆಜಿಲ್ ಪಡೆದುಕೊಂಡಿದೆ. ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್‌ ಭಾಗವಹಿಸುವ ಕೊನೆಯ ಸಭೆಯಾಗಿದೆ.

ಇದನ್ನೂ ಓದಿ: Narendra Modi: ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲಿ ತಾಂತ್ರಿಕ ದೋಷ

ನಂತರ ಗಯಾನಾ ದೇಶದ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಆಧರಿಸಿದ ನಮ್ಮ ಅನನ್ಯ ಸಂಬಂಧಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ನೀಡುವ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.