ಜಾರ್ಜ್‌ಟೌನ್: ಜಾಗತಿಕ ಸಹಕಾರಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದು ಸಂಘರ್ಷದ ಸಮಯವಲ್ಲ ಎಂದು ಪುನರುಚ್ಚರಿಸಿದರು. ಗಯಾನಾ (Guyana) ಪ್ರವಾಸದಲ್ಲಿರುವ ಅವರು ಅಲ್ಲಿನ ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. “ಶ್ರೀಲಂಕಾ, ಮಾಲ್ಡೀವ್ಸ್ ಆಗಿರಲಿ ಅಥವಾ ಯಾವುದೇ ದೇಶವಿರಲಿ ಬಿಕ್ಕಟ್ಟು ಎದುರಿಸುತ್ತಿದ್ದರೆ ಭಾರತವು ಸ್ವಾರ್ಥವಿಲ್ಲದೆ ಸಹಾಯ ಹಸ್ತ ಚಾಚುತ್ತಿದೆ” ಎಂದು ಹೇಳಿದರು.
“ನೇಪಾಳದಿಂದ ಸಿರಿಯಾದವರೆಗೆ ಯಾವುದೇ ದೇಶವು ಭೂಕಂಪಕ್ಕೆ ತುತ್ತಾದರೂ ಭಾರತ ಸಹಾಯಹಸ್ತ ಚಾಚಲು ಮೊದಲು ಧಾವಿಸುತ್ತದೆ. ಇದು ನಮ್ಮ ಸಂಪ್ರದಾಯ. ‘ಬಾಹ್ಯಾಕಾಶ ಮತ್ತು ಸಮುದ್ರ’ ಸಾರ್ವತ್ರಿಕ ಸಹಕಾರದ ವಿಷಯವಾಗಬೇಕೇ ಹೊರತು ಸಾರ್ವತ್ರಿಕ ಸಂಘರ್ಷದ ವಿಷಯವಾಗಬಾರದು. ಇದು ಸಂಘರ್ಷದ ಯುಗವಲ್ಲ” ಎಂದು ಅವರು ತಿಳಿಸಿದರು.
Addressing the Special Session of the Parliament of Guyana. https://t.co/MKnfKTx1Xl
— Narendra Modi (@narendramodi) November 21, 2024
ಮೋದಿ ಹೇಳಿದ್ದೇನು?
ʼʼಪ್ರಜಾಪ್ರಭುತ್ವವು ನಮ್ಮ ಡಿಎನ್‌ಎಯಲ್ಲಿದೆ. ಅದು ನಮ್ಮ ದೃಷ್ಟಿಯಲ್ಲಿ ಮತ್ತು ನಮ್ಮ ನಡವಳಿಕೆಯಲ್ಲಿದೆ. ನಮಗೆ ಪ್ರಜಾಪ್ರಭುತ್ವ ಮತ್ತು ಮಾನವೀಯತೆಯೇ ಮೊದಲು. ಭಾರತ ಮತ್ತು ಗಯಾನಾ ನಡುವಿನ ಬಾಂಧವ್ಯ ವಿಶೇಷವಾಗಿದೆʼʼ ಎಂದು ಅವರು ಬಣ್ಣಿಸಿದರು. “ನಾವು ಎಂದಿಗೂ ಸ್ವಾರ್ಥ, ವಿಸ್ತರಣಾ ದೃಷ್ಟಿಕೋನ ಹೊಂದಿಲ್ಲ ಅಥವಾ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವ ಧಾವಂತದಲ್ಲಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಭಾರತ ಮಾನವೀಯತೆಯನ್ನು ಪರಿಗಣಿಸುತ್ತದೆ” ಎಂದು ಪ್ರಧಾನಿ ಹೇಳಿದರು. ʼʼಪ್ರಜಾಪ್ರಭುತ್ವ ಮೊದಲು, ಮಾನವೀಯತೆ ಮೊದಲುʼʼ ಎಂಬ ತತ್ವದಲ್ಲಿ ನಂಬಿಕೆ ಇರಿಸಿರುವ ಭಾರತವು ‘ವಿಶ್ವ ಬಂಧು’ ಆಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದೆʼʼ ಎಂದು ಅವರು ಹೇಳಿದರು.
ಭಾರತ ಮತ್ತು ಗಯಾನಾ ಎರಡೂ ಒಂದೇ ರೀತಿಯ ಗುಲಾಮಗಿರಿ, ಒಂದೇ ರೀತಿಯ ಹೋರಾಟಕ್ಕೆ ಸಾಕ್ಷಿಯಾಗಿವೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು. “ಕಳೆದ 200-250 ವರ್ಷಗಳಲ್ಲಿ ಭಾರತ ಮತ್ತು ಗಯಾನಾ ಒಂದೇ ರೀತಿಯ ಗುಲಾಮಗಿರಿ, ಒಂದೇ ರೀತಿಯ ಹೋರಾಟಕ್ಕೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅನೇಕ ಮಹಾತ್ಮರು ಇಲ್ಲಿ ಮತ್ತು ಅಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಇಂದು ಎರಡೂ ದೇಶಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಿವೆ. ಅದಕ್ಕಾಗಿಯೇ ಗಯಾನಾ ಸಂಸತ್ತಿನಲ್ಲಿ ನಾನು ನಿಮ್ಮೆಲ್ಲರಿಗೂ ಭಾರತದ 140 ಕೋಟಿ ಜನರ ಪರವಾಗಿ ಶುಭಾಶಯಗಳನ್ನು ಕೋರುತ್ತಿದ್ದೇನೆ” ಎಂದು ಅವರು ತಿಳಿಸಿದರು.
ಐತಿಹಾಸಿಕ ಭೇಟಿ
ವಿಶೇಷ ಎಂದರೆ 56 ವರ್ಷದಲ್ಲಿ ಗಯಾನಾಕ್ಕೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದು ಮೊದಲ ಬಾರಿ. ತಮ್ಮ ಭಾಷಣದಲ್ಲಿ ಪಿಎಂ ಮೋದಿ ಉಭಯ ದೇಶಗಳ ನಡುವಿನ ವಿಶೇಷ ಬಂಧವನ್ನು ಒತ್ತಿ ಹೇಳಿದರು. 180 ವರ್ಷಗಳ ಹಿಂದೆ ವಲಸೆ ಬಂದ ಮೊದಲ ಭಾರತೀಯನಿಂದ ತೊಡಗಿ ಈಗಲೂ ಅಸ್ತಿತ್ವದಲ್ಲಿರುವ 2 ದೇಶಗಳ ಸೌಹಾರ್ದ ಸಂಬಂಧವನ್ನು ಅವರು ಒತ್ತಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ (ನ. 20) ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʻದಿ ಆರ್ಡರ್ ಆಫ್ ಎಕ್ಸ್‌ಲೆನ್ಸ್ʼ ಪ್ರದಾನ ಮಾಡಲಾಗಿದೆ. ಈ ಗೌರವಕ್ಕಾಗಿ ಅವರು ಗಯಾನಾ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿ ಮುಡಿಗೆ ಮತ್ತೆರಡು ಅತ್ಯುನ್ನತ ಪ್ರಶಸ್ತಿಗಳ ಗರಿ