ಅಬುಜಾ: ನೈಜೀರಿಯಾ (Nigeria) ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅಲ್ಲಿನ ಸರ್ಕಾರವು ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ (Grand Commander of the Order of the Niger) ಪುರಸ್ಕಾರ ಪ್ರದಾನ ಮಾಡಿದೆ. ಇದು ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು (Bola Ahmed Tinubu) ಪ್ರದಾನ ಮಾಡಿದರು. ಇದರೊಂದಿಗೆ ಈ ಗೌರವ ಪಡೆದ ಎರಡನೇ ವಿದೇಶಿ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಈ ಹಿಂದೆ 1969ರಲ್ಲಿ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಪ್ರಶಸ್ತಿ ಸ್ವೀಕರಿಸಿದ ನಂತರ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ ಅವರು, ಈ ಗೌರವವನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸಿದ್ದಾರೆ.
Honoured to be conferred with the ‘Grand Commander of the Order of the Niger’ Award by Nigeria. I accept it with great humility and dedicate it to the people of India. https://t.co/AyQ6v4EotH
— Narendra Modi (@narendramodi) November 17, 2024
ಮೋದಿ ಹೇಳಿದ್ದೇನು?
“ನೈಜೀರಿಯಾದ ‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪ್ರಶಸ್ತಿಯನ್ನು ಬಹಳ ನಮ್ರತೆಯಿಂದ ಸ್ವೀಕರಿಸುತ್ತೇನೆ ಹಾಗೂ ಅದನ್ನು ಭಾರತದ 140 ಕೋಟಿ ಜನರಿಗೆ ಮತ್ತು ಭಾರತ ಮತ್ತು ನೈಜೀರಿಯಾದ ಸ್ನೇಹಕ್ಕೆ ಅರ್ಪಿಸುತ್ತೇನೆ” ಎಂದು ಮೋದಿ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ದೀರ್ಘ ಕಾಲದ ಸಂಬಂಧವನ್ನು ಒಪ್ಪಿಕೊಂಡ ಮೋದಿ, ಪ್ರಜಾಪ್ರಭುತ್ವ ಮತ್ತು ಆರ್ಥಿಕ ಚಲನಶೀಲತೆಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.
“ಕ್ರಿಯಾತ್ಮಕ ಆರ್ಥಿಕತೆಗಳನ್ನು ಹೊಂದಿರುವ 2 ಪ್ರಜಾಪ್ರಭುತ್ವ ದೇಶವಾಗಿ ನಾವು ಜನರ ಯೋಗಕ್ಷೇಮಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ನ. 17 ರಿಂದ ನ. 21ರವರೆಗೆ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾ ಸೇರಿದಂತೆ 3 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಭಾನುವಾರ ಅಬುಜಾಗೆ ಆಗಮಿಸಿದರು. ನೈಜೀರಿಯಾದ ಫೆಡರಲ್ ಕ್ಯಾಪಿಟಲ್ ಟೆರಿಟರಿಯ ಸಚಿವ ನ್ಯೆಸೊಮ್ ಎಜೆನ್ವೊ ವಿಕ್ ಅವರು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
17 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಭೇಟಿ ವೇಳೆ ಭಾರತ ಮತ್ತು ನೈಜೀರಿಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಪರಿಶೀಲಿಸುವುದರ ಜತೆಗೆ, ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಮೋದಿ ಚರ್ಚೆ ನಡೆಸಲಿದ್ದಾರೆ.
ಜಿ20 ಶೃಂಗಸಭೆಯಲ್ಲಿ ಭಾಗಿ
ನ. 18-19ರಂದು ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ. ಶೃಂಗಸಭೆಯಲ್ಲಿ ಮೋದಿ ಜಾಗತಿಕ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಭಾರತದ ನಿಲುವನ್ನು ಮಂಡಿಸಲಿದ್ದಾರೆ ಮತ್ತು ಕಳೆದ ಬಾರಿ ಭಾರತ ಆಯೋಜಿಸಿದ್ದ ಜಿ20 ಶೃಂಗಸಭೆಯಲ್ಲಿನ ನಾಯಕರ ಘೋಷಣೆ ಮತ್ತು ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯ ನಿರ್ಣಯಗಳನ್ನು ತಿಳಿಸಲಿದ್ದಾರೆ. ಜಿ20 ಶೃಂಗಸಭೆಯಲ್ಲಿ ಮೋದಿ ಹಲವು ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Narendra Modi : ಮೊದಲ ಬಾರಿಗೆ ನೈಜೀರಿಯಾಗೆ ಪ್ರಧಾನಿ ಮೋದಿ ಭೇಟಿ ; ಭಾರತೀಯ ವಲಸಿಗರಿಂದ ಭವ್ಯ ಸ್ವಾಗತ