Thursday, 12th December 2024

ಅಮೆರಿಕದ ಹೊಸ ದೇಶೀಯ ನೀತಿ ಸಲಹೆಗಾರರಾಗಿ ನೀರಾ ಟಂಡೆನ್ ಆಯ್ಕೆ

ವಾಷಿಂಗ್ಟನ್: ಮಾಜಿ ರಾಯಭಾರಿ ಸುಸಾನ್ ರೈಸ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಹಿನ್ನೆಲೆ ಅಧ್ಯಕ್ಷರ ಸಹಾಯಕ ಮತ್ತು ದೇಶೀಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲು ಭಾರತೀಯ – ಅಮೆರಿಕನ್ ಮೂಲದ ನೀರಾ ಟಂಡೆನ್ ಅವರನ್ನು ಅಧ್ಯಕ್ಷ ಜೋ ಬೈಡನ್ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ಅಧ್ಯಕ್ಷ ಬೈಡನ್ ಮತ್ತು ಸಿಬ್ಬಂದಿ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಟಂಡೆನ್ ಅವರು, ಶ್ವೇತಭವನದ ಮೂರು ಪ್ರಮುಖ ನೀತಿ ಮಂಡಳಿಗಳನ್ನು ಮುನ್ನಡೆಸಿದ ಮೊದಲ ಏಷಿಯನ್​ – ಅಮೆರಿಕನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮಾತನಾಡಿ​, “ನೀರಾ ಟಂಡೆನ್ ಅವರು ಆರ್ಥಿಕತೆ, ಜನಾಂಗೀಯ ಸಮಾನತೆ, ಆರೋಗ್ಯ, ರಕ್ಷಣೆ, ವಲಸೆ ಮತ್ತು ಶಿಕ್ಷಣ ಸೇರಿದಂತೆ ದೇಶೀಯ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಇನ್ನುಮುಂದೆ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ಹೇಳಿದರು.

ಬೈಡನ್ ಅವರು ಆರಂಭದಲ್ಲಿ ಟಂಡೆನ್ ಅವರನ್ನು ಕಛೇರಿ ಆಫ್ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಮುಖ್ಯಸ್ಥರಾಗಿ ನಾಮ ನಿರ್ದೇಶನ ಮಾಡಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ಅವರ ನಾಮನಿರ್ದೇಶನವನ್ನು ಹಿಂಪಡೆಯಲಾಯಿತು. ಒಬಾಮಾ ಮತ್ತು ಕ್ಲಿಂಟನ್ ಆಡಳಿತಗಳಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ, ಟಂಡೆನ್ ಅವರು ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ ಮತ್ತು ಸೆಂಟರ್ ಫಾರ್ ಅಮೇರಿಕನ್ ಪ್ರೋಗ್ರೆಸ್ ಆಕ್ಷನ್ ಫಂಡ್‌ನ ಅಧ್ಯಕ್ಷರಾಗಿ ಮತ್ತು ಸಿಇಒ ಆಗಿದ್ದರು.

ಟಂಡೆನ್, ಈ ಹಿಂದೆ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.