ಕಾಠ್ಮಂಡು: ಭಾರತ(India) ಮತ್ತು ನೇಪಾಳ(Nepal) ನಡುವಿನ ಭೂವಿವಾದ ಮತ್ತೆ ಭುಗಿಲೆದ್ದಿದೆ. ಭಾರತದ ಕೆಲವು ಭೂಭಾಗವನ್ನು ನೇಪಾಳ(Nepal Land dispute) ತನ್ನ ಭೂಪಟದಲ್ಲಿ ಸೇರಿಸಿಕೊಂಡು ತನ್ನ ಭೂಪಟ ತಿದ್ದುಪಡಿ ಮಾಡಿರುವ ಬೆನ್ನಲ್ಲೇ, ಇದೇ ನಕ್ಷೆಯನ್ನೊಳಗೊಂಡ ನೋಟುಗಳನ್ನು ಪರಿಚಯಿಸಲು ಅಲ್ಲಿನ ಕೇಂದ್ರೀಯ ಬ್ಯಾಂಕ್ ಮುಂದಾಗಿದೆ.
ಇನ್ನು ಈ ಬಗ್ಗೆ ಕೇಂದ್ರೀಯ ಬ್ಯಾಂಕ್ ಜಂಟಿ ವಕ್ತಾರ ದಿಲ್ಲಿರಅಮ್ ಪೊಖರೆಲ್ ಅವರು ಆನ್‌ಲೈನ್ ನ್ಯೂಸ್ ಪೋರ್ಟಲ್ Nepalkhabar.com ನ ವರದಿಯಲ್ಲಿ ದೃಢಪಡಿಸಿದ್ದಾರೆ. ನೇಪಾಳ ರಾಷ್ಟ್ರ ಬ್ಯಾಂಕ್ ಈ ನವೀಕರಿಸಿದ ಬ್ಯಾಂಕ್ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಯನ್ನು ಮುಂದುವರೆಸುತ್ತಿದೆ, ಇದರಲ್ಲಿರುವ ದೇಶದ ಹೊಸ ಭೂಪಟ ನೇಪಾಳದ ಭೂಪ್ರದೇಶದ ಭಾಗವಾಗಿ ಕಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಇನ್ನು ಈ ನೋಟುಗಳನ್ನು ನವೀಕರಿಸುವ ಆದೇಶವನ್ನು ಮೇ3ರಂದು ಅಂದಿನ ಪ್ರಧಾನಿ ಪುಷ್ಪ ಕಮಲ್ ದಹಲ್ ಹೊರಡಿಸಿದ್ದರು. ಅಲ್ಲದೇ ನೋಟಿನಲ್ಲಿ ನೇಪಾಳ ತನ್ನದೆಂದು ಸ್ವಯಂಘೋಷಿಸಿಕೊಂಡಿರುವ ಭಾರತದ ಕೆಲವು ಪ್ರಾಂತ್ಯಗಳನ್ನೊಳಗೊಂಡಂತಹ ಭೂಪಟವನ್ನೇ ಬಳಸುವಂತೆ ಆದೇಶಿಸಿದ್ದರು. ಇದೀಗ ಈ ಪ್ರಕ್ರಿಯೆ ಇದೆ ಮುಂದುವರೆದಿದೆ ಎಂಬುದು ಕೇಂದ್ರೀಯ ಬ್ಯಾಂಕ್ ಹೇಳಿಕೆಯಿಂದ ಬಯಲಾಗಿದೆ.
ಏನಿದು ವಿವಾದ?
ನೇಪಾಳವು ಭಾರತದ ಐದು ರಾಜ್ಯಗಳಾದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳೊಂದಿಗೆ 1,850 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿದೆ. ಗಡಿ ಪ್ರದೇಶವು ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಸಂವಹನದ ಮಹತ್ವದ ಪ್ರದೇಶವಾಗಿದೆ.
ನೇಪಾಳದ ಕರೆನ್ಸಿಯಲ್ಲಿ ನವೀಕರಿಸಿದ ನಕ್ಷೆಯು ನೇಪಾಳ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ವಿಶಾಲ ಸಂದರ್ಭದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಭಾರತಕ್ಕೆ ಸೇರಿದ ಪ್ರಾಂತ್ಯಗಳಾದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡಿರುವ ಪರಿಷ್ಕೃತ ನಕ್ಷೆಯನ್ನು ನೇಪಾಳ ಸರ್ಕಾರವು ಕೆ ಪಿ ಶರ್ಮಾ ಒಲಿ ನೇತೃತ್ವದಲ್ಲಿ ಮೇ 2020 ರಲ್ಲಿ ಮೊದಲು ಪರಿಚಯಿಸಿತು. ಇದಕ್ಕೆ ಭಾರತ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಆದರೂ ಈ ಹೊಸ ನಕ್ಷೆಯನ್ನು ನೇಪಾಳ ಸಂಸತ್ತು ಔಪಚಾರಿಕವಾಗಿ ಅನುಮೋದಿಸಿತು ಮತ್ತು ಅಧಿಕೃತ ದಾಖಲೆಗಳಲ್ಲಿ ಬಳಸಲಾದ ಹಿಂದಿನ ಆವೃತ್ತಿಯನ್ನು ಬದಲಾಯಿಸಿತು.
ಭಾರತವು ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುವುದನ್ನು ಮುಂದುವರೆಸಿದೆ, ಈ ಪ್ರದೇಶಗಳು ನ್ಯಾಯಸಮ್ಮತವಾಗಿ ತನಗೆ ಸೇರಿದೆ ಎಂದು ವಾದಿಸುತ್ತಲೇ ಬಂದಿದೆ. ಇದೀಗ ನೇಪಾಳ ತನ್ನ ನೋಟಿನಲ್ಲೂ ಈ ಪ್ರದೇಶಗಳನ್ನೊಳಗೊಂಡ ನಕ್ಷೆಯನ್ನು ಬಳಸಿರುವುದು ಮತ್ತ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡಲು ನಾಂದಿ ಹಾಡಲಿದೆ.
ಈ ಸುದ್ದಿಯನ್ನೂ ಓದಿ: ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಪ್ರಮಾಣ ವಚನ ಸ್ವೀಕಾರ