ಕಠ್ಮಂಡು: ನೇಪಾಳ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಂಶೇರ್ ರಾಣಾ ಅವರು ರಾಜೀನಾಮೆ ನೀಡಲು ನಿರಾಕರಿಸಿದ ಘಟನೆ ನಡೆದಿದೆ.
ಶೇರ್ ಬಹದ್ದೂರ್ ದೇವುಬಾ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ನ್ಯಾಯ ಮೂರ್ತಿಗಳು ತಮ್ಮ ಸೋದರ ಮಾವ ಅವರಿಗೆ ಸಹಾಯ ಮಾಡಿದ ಆರೋಪದ ನಡುವೆಯೇ ಅವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಒಂದು ವಿಭಾಗವು ರಾಣಾ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಕೆಲವು ವಕೀಲರು ನ್ಯಾಯಾಲಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಬೀದಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಧ್ವನಿ ಎತ್ತಿದ ಮಾತ್ರಕ್ಕೆ ತಾವು ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ‘ನಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಅಗತ್ಯವಿದ್ದರೆ ಕಾನೂನು ಕ್ರಮ ಅನುಸರಿಸುತ್ತೇನೆ’ ಎಂದು ರಾಣಾ ಅವರು ಹೇಳಿರುವುದಾಗಿ ದಹಲ್ ಉಲ್ಲೇಖಿಸಿದರು.
ರಾಣಾ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ನೇಪಾಳ ವಕೀಲರ ಸಂಘ ಎಚ್ಚರಿಸಿದೆ. ಆದರೂ ಬುಧವಾರದಿಂದ ತಮ್ಮ ದೈನಂದಿನ ಕೆಲಸಕ್ಕೆ ಮರಳಲು ಆರಂಭಿಸಿದ್ದಾರೆ ಎಂದು ದಹಲ್ ಹೇಳಿದರು.