ತಾಯಿಯ ಎದೆ ಹಾಲು ಮಗುವಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮಗು ಹುಟ್ಟಿದ ಕನಿಷ್ಠ ಆರು ತಿಂಗಳವರೆಗೆ ಎದೆಹಾಲನ್ನು ಹೊರತುಪಡಿಸಿ ಬೇರೆ ಏನನ್ನೂ ನೀಡದಂತೆ ವೈದ್ಯರು ಸಲಹೆ ನೀಡುತ್ತಾರೆ. ಹಾಗಾಗಿ ತಾಯಂದಿರು ತಮ್ಮ ಮಗುವು ಆರೋಗ್ಯವಾಗಿರಲೆಂದು ಗಂಟೆಗೊಮ್ಮೆ ಮಗುವಿಗೆ ಹಾಲುಣಿಸುತ್ತಾರೆ. ಆದರೆ, ಸ್ತನ್ಯಪಾನ ಮಾಡುವಾಗ ಮಗುವೊಂದು(Newborn Baby Death) ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಮಗುವಿಗೆ ಹಾಲುಣಿಸುವಾಗ ತಾಯಿ ನಿದ್ರೆ ಮಾಡಿದ್ದಾಳೆ. ನಂತರ ಅವಳಿಗೆ ಎಚ್ಚರವಾಗಿ ನೋಡಿದಾಗ ಮಗು ಸಾವನ್ನಪ್ಪಿರುವುದು ಕಂಡು ಬಂದಿದೆ.
ಈ ಆತಂಕಕಾರಿ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಮೃತ ಮಗುವಿನ ಹೆಸರು ಎವೆಲಿನ್. ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ತಾಯಿ ಮತ್ತು ಮಗು ಇಬ್ಬರನ್ನೂ ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಗೆ ಮರಳಿದ ನಂತರ ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿದ್ದಳು. ದುರಂತವೆಂದರೆ, ಸ್ತನ್ಯಪಾನ ಮಾಡುತ್ತಿರುವಾಗ ತಾಯಿ ನಿದ್ರೆ ಮಾಡಿದ ಪರಿಣಾಮ ಮಗು ಸಾವನ್ನಪ್ಪಿದೆ. ಇದನ್ನು ತಿಳಿದ ತಾಯಿಯ ಗೋಳು ಮುಗಿಲುಮುಟ್ಟಿತ್ತು.
ಹೆರಿಗೆಯ ನಂತರ ತಾಯಿ ತುಂಬಾ ದಣಿದಿದ್ದಳು. ಸಾಕಷ್ಟು ವಿಶ್ರಾಂತಿ ಪಡೆದಿರಲಿಲ್ಲ. ಆಕೆಯನ್ನು ಆ ಸ್ಥಿತಿಯಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಕೂಡ ಮಾಡಲಾಗಿತ್ತು. ಮನೆಗೆ ಬಂದ ನಂತರ ಅವಳು ಮಗುವನ್ನು ತನ್ನ ಪಕ್ಕ ಮಲಗಿಸಿ ಸ್ತನ್ಯಪಾನ ಮಾಡಲು ಶುರುಮಾಡಿದ್ದಳು. ಸ್ತನ್ಯಪಾನ ಮಾಡುವಾಗ, ಅವಳಿಗೆ ನಿದ್ರೆ ಬಂದಿದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಆಕೆಗೆ ಎಚ್ಚರವಾದಾಗ, ಮಗು ಅಲುಗಾಡುತ್ತಿರಲಿಲ್ಲ. ಅದನ್ನು ಅವಳು ಗಮನಿಸಿ ಮಗುವಿನ ಹೃದಯ ಬಡಿತವನ್ನು ಪರೀಕ್ಷಿಸಿದಾಗ ಅದು ನಿಂತಿದ್ದು, ಮಗುವಿನ ಉಸಿರಾಟ ಕೂಡ ನಿಂತಿದ್ದರಿಂದ ಮಗು ಸಾವನಪ್ಪಿರುವುದು ಆಕೆಗೆ ತಿಳಿದಿದೆ.
ಈ ಮಗುವಿನ ಸಾವಿಗೆ ಕಾರಣವೇನೆಂದರೆ ತಾಯಿ ನಿದ್ರೆಯಲ್ಲಿದ್ದಾಗ, ಮಗು ಹಾಲು ಕುಡಿಯುವುದನ್ನು ಮುಂದುವರಿಸಿತ್ತು. ಅದು ತುಂಬಾ ಹಾಲು ಕುಡಿದಿದ್ದರಿಂದ ಅದರ ಶ್ವಾಸನಾಳವು ಹಾಲಿನಿಂದ ತುಂಬಿಕೊಂಡಿತು. ಇದರಿಂದ ಮಗುವಿಗೆ ಉಸಿರಾಡಲು ಕಷ್ಟವಾಯಿತು. ಪರಿಣಾಮವಾಗಿ ಅದು ಮಗುವಿನ ಹೃದಯ ಬಡಿತವನ್ನು ನಿಲ್ಲಿಸಿತು. ಉಸಿರಾಟವು ನಿಂತುಹೋಯಿತು. ತಕ್ಷಣ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದರು. ಈ ಘಟನೆ ಸ್ತನ್ಯಪಾನ ಮಾಡುವಾಗ ತಾಯಂದಿರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.
ಸ್ತನ್ಯಪಾನ ಮಾಡುವಾಗ ತಾಯಂದಿರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?:
- ಸ್ತನ್ಯಪಾನ ಮಾಡುವಾಗ, ಮಗುವಿನ ತಲೆಯನ್ನು ತಾಯಿಯ ಎದೆಯ ಮೇಲೆ ಸ್ವಲ್ಪ ಎತ್ತರದಲ್ಲಿ 45 ಡಿಗ್ರಿ ಕೋನದಲ್ಲಿ ಇರಿಸಬೇಕು. ನಿಮ್ಮ ಕೈಯಿಂದ ಮಗುವಿನ ಕುತ್ತಿಗೆ ಮತ್ತು ತಲೆಯನ್ನು ಬೆಂಬಲವಾಗಿ ಇಟ್ಟುಕೊಳ್ಳಬೇಕು.
- ಮಗು ಮಲಗಿರುವಾಗ ಅಥವಾ ತಾಯಿ ನಿದ್ರೆ ಮಾಡುತ್ತಾ ಮಗುವಿಗೆ ಸ್ತನ್ಯಪಾನ ಮಾಡುವುದನ್ನು ತಪ್ಪಿಸಿ.
- ಹಾಲುಣಿಸಿದ ತಕ್ಷಣ ಮಗುವನ್ನು ಕೆಳಗೆ ಮಲಗಿಸಬೇಡಿ. ಏಕೆಂದರೆ ಇದು ಅಜೀರ್ಣ ಅಥವಾ ವಾಂತಿಗೆ ಕಾರಣವಾಗಬಹುದು.
ಇದನ್ನೂ ಓದಿ: ಪೋಷಕರೇ ಎಚ್ಚರ! ನವಜಾತ ಶಿಶುಗಳ ತಲೆಯನ್ನು ಮಸಾಜ್ ಮಾಡುವುದು ಅಪಾಯಕಾರಿ!
- ಹಾಲುಣಿಸಿದ ನಂತರ ಮಗುವನ್ನು ನಿಮ್ಮ ಭುಜದ ಮೇಲೆ ಹಿಡಿದುಕೊಳ್ಳಿ. ಅದರ ಬೆನ್ನನ್ನು ನಿಧಾನವಾಗಿ ತಟ್ಟಿ. ಇದು ಮಗುವಿನ ಹೊಟ್ಟೆಯಲ್ಲಿ ಸಿಕ್ಕಿಬಿದ್ದ ಯಾವುದೇ ಗಾಳಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಮಗು ತೇಗಿದ ನಂತರ ಮಲಗಿಸಿ.