ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ದೀಪಾವಳಿ ಹಬ್ಬದಂದು ಶಾಲೆಗಳಿಗೆ ಸಾರ್ವತ್ರಿಕ ರಜೆ ನೀಡುವ ಐತಿಹಾಸಿಕ ಮಸೂದೆಗೆ ಗವರ್ನರ್ ಕ್ಯಾಥಿ ಹೋಚುಲ್ ಅವರು ಅಂಕಿತ ಹಾಕಿದ್ದಾರೆ.
‘ನ್ಯೂಯಾರ್ಕ್ ನಗರದಲ್ಲಿ ವಿವಿಧ ಧರ್ಮದ ಜನರು ನೆಲೆಸಿದ್ದಾರೆ. ವೈವಿಧ್ಯಮಯ ಸಂಸ್ಕೃತಿಯನ್ನು ಗುರುತಿಸುವ ಸಲುವಾಗಿ ನಾವು ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಹೋಚುಲ್ ಅವರು ಹೇಳಿದ್ದಾರೆ.
‘ನ್ಯೂಯಾರ್ಕ್ ನಗರದ ಎಲ್ಲಾ ಶಾಲೆಗಳಿಗೂ ಪ್ರತಿ ವರ್ಷ ದೀಪಾವಳಿ ದಿನದಂದು ರಜೆ ನೀಡಬೇಕೆಂದು ಮಸೂದೆಯಲ್ಲಿ ಕೋರಲಾಗಿತ್ತು’ ಎಂದು ತಿಳಿಸಿದ್ದಾರೆ.
‘ಜಗತ್ತಿನಾದ್ಯಂತ ಇರುವ ಸಂಪ್ರದಾಯಗಳನ್ನು ಆಚರಿಸಲು ನಮ್ಮ ಮಕ್ಕಳಿಗೆ ಈ ರಜೆಯಿಂದ ಅವಕಾಶ ಸಿಗಲಿದೆ’ ಎಂದಿದ್ದಾರೆ.
ದೀಪಾವಳಿ ದಿನ ಶಾಲೆಗಳಿಗೆ ರಜೆ ನೀಡಬೇಕೆಂದು ಕೋರಿ ಮಸೂದೆ ಮಂಡಿಸಿದ್ದ ಭಾರತ ಮೂಲದ ನ್ಯೂಯಾರ್ಕ್ ಸಂಸದೆ ಜೆನ್ನಿಫರ್ ರಾಜಕುಮಾರ್ ಅವರು, ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದರು.
‘ಮಸೂದೆಗೆ ಅಂಕಿತ ಬೀಳುವ ಮೂಲಕ ನನ್ನ ಹೋರಾಟಕ್ಕೆ ಜಯ ಸಿಕ್ಕಿರುವುದು ಸಂತಸ ತಂದಿದೆ’ ಎಂದು ಜೆನ್ನಿಫರ್ ಹೇಳಿದ್ದಾರೆ.