ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶಾಸಕ ಅಬ್ದುಲ್ ಕಯ್ಯುಮ್ ನಿಯಾಜಿಯವರನ್ನು ಪಾಕ್ ಆಕ್ರಮಿತ ಕಾಶ್ಮೀರದ ಮುಂದಿನ ಪ್ರಧಾನಿಯಾಗಿ ಬುಧವಾರ ನೇಮಿಸಿದ್ದಾರೆ. ಅಬ್ಬಾಸ್ ಪುರ್-ಪೂಂಚ್ ಪ್ರದೇಶದಿಂದ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿಯಾಜಿ ಗೆಲುವು ಸಾಧಿಸಿದ್ದರು.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು 53 ಸದಸ್ಯ ಬಲದ ಸದನದಲ್ಲಿ 32 ಸ್ಥಾನಗಳನ್ನು ಪಡೆದುಕೊಂಡಿದೆ. ಪಿಒಕೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ರಚಿಸುತ್ತಿದೆ. ಪಿಒಕೆಯಲ್ಲಿ ನಡೆದ ಇತ್ತೀಚಿನ ಚುನಾವಣೆಯನ್ನು ಭಾರತ ತಿರಸ್ಕರಿಸಿದೆ.
ಪಿಒಕೆಯಲ್ಲಿನ ಚುನಾವಣೆ ಬಗ್ಗೆ ಕಟುವಾದ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನವು ಭಾರತೀಯ ಭೂಪ್ರದೇಶಗಳ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ ಎಂದು ಹೇಳಿದ್ದಾರೆ.