ಇಸ್ಲಾಮಾಬಾದ್: ಪಾಕಿಸ್ತಾನದ ಪರಮಾಣು ವಿಜ್ಞಾನಿ ಡಾ ಅಬ್ದುಲ್ ಖಾದೀರ್ ಖಾನ್ (85) ಇಸ್ಲಾಮಾಬಾದ್ ನಲ್ಲಿ ಭಾನುವಾರ ನಿಧನರಾದರು.
ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಕೊನೆಯುಸಿರೆಳೆದರು.
1936ರಲ್ಲಿ ಭಾರತದ ಭೋಪಾಲ್‌ನಲ್ಲಿ ಜನಿಸಿದ ಎ.ಕೆ ಖಾನ್, ವಿಭಜನೆಯ ನಂತರ 1947ರಲ್ಲಿ ತಮ್ಮ ಕುಟುಂಬ ದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು. ಎ.ಕೆ ಖಾನ್ ಕೋವಿಡ್-19 ಹಿನ್ನೆಲೆಯಲ್ಲಿ ಆಗಸ್ಟ್ 26 ರಂದು ‘ಖಾನ್ ರಿಸರ್ಚ್ ಲ್ಯಾಬೋರೇಟರೀಸ್ ಆಸ್ಪತ್ರೆ’ಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಪ್ರಧಾನಿಯಾಗಲಿ ಅವರ ಸಂಪುಟ ಸಹೋದ್ಯೋಗಿಗಳಾಗಲಿ ತಮ್ಮ ಆರೋಗ್ಯ ವಿಚಾರಿಸಲಿಲ್ಲ ಎಂದು ಖಾನ್ ಕಳೆದ ತಿಂಗಳು ಆರೋಪಿಸಿದ್ದರು.
ಪಾಕಿಸ್ತಾನದ ಅಣ್ವಸ್ತ್ರ ಪ್ರಸರಣದಲ್ಲಿನ ತಮ್ಮ ಪಾತ್ರದ ಕುರಿತು ಖಾನ್ 2004ರಲ್ಲಿ ಬಹಿರಂಗವಾಗಿಯೇ ಘೋಷಿಸಿ ಕೊಂಡಿದ್ದರು. ಖಾನ್ ಅವರನ್ನು ಪಾಕಿಸ್ತಾನದ ಅಣ್ವಸ್ತ್ರ ಯೋಜನೆ ಪಿತಾಮಹ ಎಂದು ಕರೆಯಲಾಗುತ್ತದೆ.