Monday, 16th September 2024

Pakistan Crisis: ಪಾಕ್‌ ಸ್ಥಿತಿ ಅಯೋಮಯ; ಮಾಲ್‌ಗೆ ನುಗ್ಗಿ ಬಟ್ಟೆಗಳನ್ನು ಲೂಟಿ ಮಾಡಿದ ಜನ; ಕೊನೆಗೆ ಲಾಠಿಚಾರ್ಜ್‌!

ಕರಾಚಿ:ನೆರೆಯ ರಾಷ್ಟ್ರ ಪಾಕಿಸ್ತಾನ(Pakistan)ದ ಸ್ಥಿತಿ ದಿನೇ ದಿನೇ ಹೇಳತೀರದಂತಿದೆ. ದೇಶ ಆರ್ಥಿಕ ದಿವಾಳಿ (Pakistan Crisis)ಗೆ ತುತ್ತಾಗಿರುವ ಹಿನ್ನೆಲೆ ಕನಿಷ್ಟ ಸೌಲಭ್ಯಕ್ಕೂ ಜನ ಪರದಾಡುವಂತಹ ಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೇ ಬೇರೆ ದಾರಿ ಕಾಣದೇ ಜನ ಕಳ್ಳತನ ಲೂಟಿಗೂ ಇಳಿದಿದ್ದಾರೆ. ಇದೀಗ ಅದಕ್ಕೆ ಪೂರಕ ಎಂಬಂತೆ  ಕರಾಚಿಯಲ್ಲೊಂದು ನಿನ್ನೆ ಆಘಾತಕಾರಿ ಘಟನೆ ನಡೆದಿದೆ. ಹೊಸದಾಗಿ ತೆರೆದಿರುವ ಮಾಲ್‌ಗೆ ನುಗ್ಗಿ ಜನ ಬಟ್ಟೆಗಳನ್ನು ಲೂಟಿ ಮಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದು ಪಾಕಿಸ್ತಾನದ ನೈಜ ಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ.

ಏನಿದು ಘಟನೆ?

ಸ್ಥಳೀಯ ವರದಿಗಳ ಪ್ರಕಾರ, ವಿದೇಶಿ ಉದ್ಯಮಿಯೋರ್ವ ಪಾಕಿಸ್ತಾನದ ಕರಾಚಿಯಲ್ಲಿ ಡ್ರೀಮ್‌ ಬಜಾರ್‌ ಎಂಬ ಮಾಲ್‌ವೊಂದನ್ನು ತೆರದಿದ್ದಾನೆ.  ಉದ್ಘಾಟನೆ ದಿನವಾದ ನಿನ್ನೆ ವಿಶೇಷ ಆಫರ್‌ ಕೂಡ ಘೋಷಿಸಿದ್ದ. ರಿಯಾಯಿತಿ ದರದಲ್ಲಿ ಬಟ್ಟೆಗಳು ಸಿಗುತ್ತವೆ ಎಂದು ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದ್ದ. ಇದನ್ನು ನೋಡಿದ ಜನ ಏಕಾಏಕಿ ಮಾಲ್‌ಗೆ ನುಗ್ಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ ಜನರನ್ನು ನಿಯಂತ್ರಣ ಅಷ್ಟು ಸುಲಭದ ಮಾತಾಗಿರಲಿಲ್ಲ. ಕೈಗೆ ಸಿಕ್ಕ ಬಟ್ಟೆಗಳನ್ನು ಹಿಡಿದುಕೊಂಡು ಹೋಗಲು ಜನ ಶುರು ಮಾಡಿದ್ದರು. ವಿರೋಧ ವ್ಯಕ್ತಪಡಿಸಿದಾಗ ಅಂಗಡಿಯನೇ ಧ್ವಂಸ ಮಾಡಲು ಮುಂದಾಗಿದ್ದರು. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರ ನಿಯಂತ್ರಣಕ್ಕೆ ಲಾಠಿ ಚಾರ್ಜ್‌ ಮಾಡಿದ್ದಾರೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗುಂಪು ಅಂಗಡಿಯನ್ನು ಲೂಟಿ ಮಾಡುವುದು ಮತ್ತು ಬ್ರಾಂಡ್ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ.

ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಘಟನೆ

ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಅಂಗಡಿಯನ್ನು ತೆರೆಯುವ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮತ್ತು ಪ್ರಚಾರ ಮಾಡಲಾಯಿತು. ಆದರೆ, ಮಾಲ್ ಆಡಳಿತಗಾರರು ಮತ್ತು ಅಂಗಡಿ ಮಾಲೀಕರು ಸಹ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಬರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಡ್ರೀಮ್ ಬಜಾರ್ ಸಿಬ್ಬಂದಿ ಅಂಗಡಿಯೊಳಗೆ ಪ್ರವೇಶಿಸಲು ಮಾಲ್‌ನ ಹೊರಗೆ ಜಮಾಯಿಸಿದ ಬೃಹತ್ ಗುಂಪನ್ನು ತಡೆಯಲು ಮಾಡಿದ ಹತಾಶ ಪ್ರಯತ್ನಗಳನ್ನು ವೀಡಿಯೊಗಳು ತೋರಿಸಿವೆ. ಸಿಬ್ಬಂದಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಆದರೆ ಗುಂಪು ಸರಳವಾಗಿ ಅಂಗಡಿಯೊಳಗೆ ನುಗ್ಗಿತು. ಜನರು ಅಂಗಡಿಯನ್ನು ಧ್ವಂಸಗೊಳಿಸುವುದು ಮತ್ತು ಬಟ್ಟೆ ಮತ್ತು ಪರಿಕರಗಳನ್ನು ಲೂಟಿ ಮಾಡುವುದು ಕಂಡುಬಂದಿದೆ. ಜನಸಂದಣಿಯಲ್ಲಿ ಮಹಿಳೆಯರೂ ಸೇರಿದ್ದಾರೆ ಮತ್ತು ಮಹಿಳೆಯೊಬ್ಬರು ಚಿಕ್ಕ ಮಗುವನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ: https://x.com/MeghUpdates/status/1830147399911612752

ಉಗ್ರರ ಪೋಷಣೆ, ಉಗ್ರರಿಗೆ ಹಣಕಾಸು ನೆರವು, ಚೀನಾದ ಯೋಜನೆಗಳಿಗೆ ಹಣ ಸುರಿಯುವುದು, ಅಸಮರ್ಥ ನಾಯಕತ್ವ, ದೂರದೃಷ್ಟಿಯೇ ಇಲ್ಲದ ಆರ್ಥಿಕ ನೀತಿಗಳಿಂದಾಗಿ ಪಾಕಿಸ್ತಾನವು ( ಸಂಪೂರ್ಣವಾಗಿ ದಿವಾಳಿ ಅಂಚಿಗೆ ಬಂದುನಿಂತಿದೆ. ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದ್ದು, ಬಡವರು ನಿತ್ಯ ಪರದಾಡುತ್ತಿದ್ದಾರೆ. ಜಾಗತಿಕವಾಗಿಯೂ ಪಾಕಿಸ್ತಾನಕ್ಕೆ ಹಣಕಾಸು ನೆರವು ಸಿಗುತ್ತಿಲ್ಲ. ಹೆಚ್ಚಿನ ಸಾಲವೂ ಸಿಗುತ್ತಿಲ್ಲ. ಇದರ ಬೆನ್ನಲ್ಲೇ, ಪಾಕಿಸ್ತಾನದ ಸಾಲದ ಪ್ರಮಾಣವು 2025ರ ವೇಳೆಗೆ 79 ಲಕ್ಷ ಕೋಟಿ ರೂ. (ಪಾಕಿಸ್ತಾನದ ಕರೆನ್ಸಿ) ಆಗಲಿದೆ ಎಂದು ವರದಿಯೊಂದು ತಿಳಿಸಿದೆ.

Leave a Reply

Your email address will not be published. Required fields are marked *