Thursday, 12th December 2024

ಪ್ಯಾಲೆಸ್ಟೈನ್ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ

ವಾಷಿಂಗ್ಟನ್ ಡಿಸಿ: ಅಮೆರಿಕದ ಬರ್ಲಿಂಗ್ಟನ್​ನಲ್ಲಿ ಪ್ಯಾಲೆಸ್ಟೈನ್ ಮೂಲದ ಮೂವರು ಯುವಕರ ಮೇಲೆ ಗುಂಡಿನ ದಾಳಿ ನಡೆದಿದೆ.

ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಬರ್ಲಿಂಗ್‌ಟನ್ ಸಿಟಿಯ ವರ್ಮೊಂಟ್‌ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳು ಬರ್ಲಿಂಗ್ಟನ್‌ನಲ್ಲಿ ಸಂಬಂಧಿಕರನ್ನು ಭೇಟಿಯಾದ ನಂತರ ಪ್ರಾಸ್ಪೆಕ್ಟ್ ಸ್ಟ್ರೀಟ್‌ನಲ್ಲಿ ತಿರುಗಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ವರ್ಮೊಂಟ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ದಾಳಿಕೋರನೊಬ್ಬ ಏಕಾಏಕಿ ನಾಲ್ಕು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಕೆಫಿಯೆಹ್ (ಸಾಂಪ್ರದಾಯಿಕ ಪ್ಯಾಲೆಸ್ಟೈನಿಯನ್ ಸ್ಕಾರ್ಫ್) ಧರಿಸಿದ್ದರು.

ಶೂಟರ್‌ನನ್ನು ಗುರುತಿಸಲಾಗಿಲ್ಲ ಅಥವಾ ಸೆರೆಹಿಡಿಯಲಾಗಿಲ್ಲ. ತನಿಖೆಯ ಆರಂಭಿಕ ಹಂತದಲ್ಲಿದೆ.

ಈ ದಾಳಿ ದ್ವೇಷದ ಅಪರಾಧವಾಗಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಗಾಯಾಳುಗಳ ಕುಟುಂಬಗಳು ಒತ್ತಾಯಿಸಿವೆ. ದಾಳಿಕೋರನಿಗೆ ಶಿಕ್ಷೆ ವಿಧಿಸು ವವರೆಗೆ ನಾವು ಸುಮ್ಮನಿರುವುದಿಲ್ಲ. ನಮ್ಮ ಮಕ್ಕಳು ತಮ್ಮ ಅಧ್ಯಯನ ಮಾಡಲು ವಿದೇಶಕ್ಕೆ ಬಂದಿದ್ದಾರೆ. ಅವರ ಮೇಲೆ ದಾಳಿ ಮಾಡಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.