ಡೆನ್ಮಾರ್ಕ್: ನಮ್ಮಲ್ಲಿ ಪೋಷಕರು(Parents and Kids) ಮಕ್ಕಳ ಬಗ್ಗೆ ತುಂಬಾ ನಿಗಾ ವಹಿಸುತ್ತಾರೆ. ಮಕ್ಕಳು ಒಂದು ಸೆಕೆಂಡು ಪೋಷಕರ ಕಣ್ಣಿಂದ ಮರೆಯಾದರೆ ಸಾಕು ಅವರನ್ನು ಹುಡುಕಾಡಲು ಶುರುಮಾಡುತ್ತಾರೆ. ಆದರೆ ಈ ದೇಶದ ಜನರು ಮಾತ್ರ ಮಕ್ಕಳನ್ನು ರಸ್ತೆಯಲ್ಲಿ ಸ್ಟ್ರಾಲರ್‌ನಲ್ಲಿ ಮಲಗಿಸಿ ಪೋಷಕರು ಬೇರೆಕಡೆ ಮೋಜು ಮಾಡಲು ಹೋಗುತ್ತಾರಂತೆ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬಹುದು, ಆದರೆ ಇದು ನಿಜ. ಹಾಗಾದ್ರೆ ಆ ದೇಶ ಯಾವುದು? ಜನರು ಹಾಗೇ ಮಾಡಲು ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.
ಡೆನ್ಮಾರ್ಕ್ ಈ ವಿಚಿತ್ರ ಪದ್ಧತಿಯನ್ನು ಹೊಂದಿರುವ ದೇಶ. ಇಲ್ಲಿನ ಜನರು ಮಕ್ಕಳನ್ನು ಸ್ಟ್ರಾಲರ್‌ನಲ್ಲಿ ಮಲಗಿಸಿ, ಯಾವುದೇ ಚಿಂತೆಯಿಲ್ಲದೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯಲು ಹೊರಗೆ ಹೋಗುತ್ತಾರಂತೆ. ಅಲ್ಲಿ ಅವರು ರೆಸ್ಟೋರೆಂಟ್‍ಗಳಲ್ಲಿ ತಿಂದು, ಕುಡಿದು ಶಾಪಿಂಗ್ ಮತ್ತು ವಾಕಿಂಗ್ ಮಾಡಿ ಮೋಜು ಮಾಡುತ್ತಾರಂತೆ. ಈ ವಿಶಿಷ್ಟ ಡ್ಯಾನಿಶ್ ಸಂಪ್ರದಾಯದ ಹಿಂದಿನ ಕಾರಣ ಮತ್ತು ಅದಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯೋಣ.
ಇದರ ಹಿಂದಿರುವ ಕಾರಣವೇನು?
ಮಕ್ಕಳನ್ನು ಬೀದಿಯಲ್ಲಿ ಮಲಗಲು ಬಿಡುವುದು ಡೆನ್ಮಾರ್ಕ್ ನಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಇಲ್ಲಿ ಎಷ್ಟೇ ಚಳಿ ಇದ್ದರೂ ಕೂಡ ಮಕ್ಕಳನ್ನು ರಸ್ತೆಯಲ್ಲಿ ಮಲಗಿಸಿ ಹೋಗುತ್ತಾರೆ. ಕೋಪನ್ ಹ್ಯಾಗನ್‍ನ ಬೀದಿಗಳಲ್ಲಿ ಮಕ್ಕಳು ಸ್ಟ್ರಾಲರ್‌ಗಳಲ್ಲಿ ಮಲಗಿರುವುದನ್ನು ನೋಡಿ ವಿದೇಶಿ ಪ್ರವಾಸಿಗರು ಕೂಡ ಹುಬ್ಬೇರಿಸುತ್ತಾರೆ! ತಾಜಾ ಗಾಳಿ ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅವರನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಆದ್ದರಿಂದ ಅವರು ತಮ್ಮ ಮಕ್ಕಳನ್ನು ರಸ್ತೆಯಲ್ಲಿ ಮಲಗಿಸಲು ಹೆದರುವುದಿಲ್ಲ.
ಅಲ್ಲದೇ ಡೆನ್ಮಾರ್ಕ್‍ನಲ್ಲಿ ಶಿಶು ವೈದ್ಯರು ಕೂಡ ಮಕ್ಕಳನ್ನು ತೆರೆದ ಗಾಳಿಯಲ್ಲಿ ಮಲಗಿಸಲು ಪೋಷಕರಿಗೆ ಸಲಹೆ ನೀಡುತ್ತಾರೆ. ತಾಜಾ ಗಾಳಿಯಲ್ಲಿ ಸಮಯ ಕಳೆಯುವುದರಿಂದ ಮಕ್ಕಳಿಗೆ ಅನೇಕ ಪ್ರಯೋಜನಗಳು ಸಿಗುತ್ತವೆ ಎಂದು ಇಲ್ಲಿನ ಜನರು ನಂಬುತ್ತಾರೆ. ಚಳಿಗಾಲದಲ್ಲಿ ಮಕ್ಕಳನ್ನು ಚಳಿಯಿಂದ ರಕ್ಷಿಸಲು ಸ್ಟ್ರಾಲರ್‌ಗಳಲ್ಲಿ ಬೆಚ್ಚಗಿನ ಕಂಬಳಿಗಳನ್ನು ಹಾಕಲಾಗುತ್ತದೆ. ವಿಶೇಷವೆಂದರೆ ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ. ಅವರು ಬೇಬಿ ಮಾನಿಟರ್ ಅನ್ನು ಸ್ಟ್ರಾಲರ್‌ನಲ್ಲಿ ಇಡುತ್ತಾರೆ. ಇದರಿಂದ ಅವರು ಮಗುವಿನ ಮೇಲೆ ಕಣ್ಣಿಡಬಹುದು. ಈ ಪದ್ಧತಿ ಸಾಕಷ್ಟು ಹಳೆಯದಾಗಿರುವುದರಿಂದ, ಇಲ್ಲಿ ಮಕ್ಕಳ ಕಳ್ಳತನದ ಭಯವಿಲ್ಲ.
ಇದನ್ನೂ ಓದಿ:ಕಾರನ್ನು ಕದ್ದ ಕಳ್ಳ ʼಕ್ಷಮಿಸಿʼ ಎಂದು ಚೀಟಿ ಬರೆದು ಅಂಟಿಸಿದ್ಯಾಕೆ?
ಒಟ್ಟಾರೆ ಸಂಸ್ಕೃತಿ, ಸಂಪ್ರದಾಯಗಳು ದೇಶದಿಂದ ದೇಶಕ್ಕೂ, ಗ್ರಾಮದಿಂದ ಗ್ರಾಮಕ್ಕೂ ತುಂಬಾ ಭಿನ್ನವಾಗಿರುತ್ತದೆ. ಒಬ್ಬರ ಸಂಸ್ಕೃತಿ, ಸಂಪ್ರದಾಯಗಳನ್ನು ನೋಡಿದರೆ ಮತ್ತೊಬ್ಬರಿಗೆ ಆಶ್ಚರ್ಯವಾಗುವ ರೀತಿ ಇರುತ್ತದೆ.