Friday, 20th September 2024

Rahul Gandhi: ಲೋಕಸಭಾ ಚುನಾವಣೆ ಸೋಲನ್ನು ಮೋದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ; ರಾಹುಲ್‌ ಗಾಂಧಿ ವ್ಯಂಗ್ಯ

Rahul Gandhi

ವಾಷಿಂಗ್ಟನ್‌: ಅಮೆರಿಕ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ʼʼಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಆಡಳಿತಾರೂಢ ಬಿಜೆಪಿಗೆ ಅನಿರೀಕ್ಷಿತವಾಗಿ ಹಿನ್ನಡೆಯಾಗಿದ್ದು, ಇದರಿಂದ ಪ್ರಧಾನಿ ನರೇಂದ್ರ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆʼʼ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿ ಬಿಜೆಪಿ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಿದೆ ಎಂದು ರಾಹುಲ್ ಗಾಂಧಿ ಸಂವಾದದಲ್ಲಿ ದೂರಿದ್ದಾರೆ. “ನಾನು ಲೋಕಸಭಾ ಚುನಾವಣೆಯನ್ನು ಗಮನಿಸುತ್ತಿದ್ದೆ. ಚುನಾವಣೆಯ ಒಂದು ಹಂತದಲ್ಲಿ ನಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಕಾಂಗ್ರೆಸ್ ಸ್ಥಗಿತಗೊಂಡ ಬ್ಯಾಂಕ್‌ ಖಾತೆಯೊಂದಿಗೆ ಚುನಾವಣೆ ಎದುರಿಸಿ, ಮೋದಿ ಅವರ ಕುತಂತ್ರವನ್ನು ಎದುರಿಸಿದೆ” ಎಂದು ಅವರು ತಿಳಿಸಿದ್ದಾರೆ. ಚುನಾವಣಾ ಫಲಿತಾಂಶವನ್ನು ಮೋದಿ ಅವರಿಗೆ ಅರಗಿಸಿಕೊಳ್ಳಲು ಸಾದ್ಯವಾಗಲಿಲ್ಲ ಎಂದೂ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಸೋಲು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

“ನೀವು ಸಂಸತ್ತಿನಲ್ಲಿ ಮೋದಿ ಅವರನ್ನು ಗಮನಿಸಿದರೆ ಅವರು ಮಾನಸಿಕವಾಗಿ ಕುಗ್ಗಿರುವುದು ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿ ಹೇಗೆ ಸೋಲಾಯಿತು ಎನ್ನುವುದು ಅವರಿಗೆ ಇನ್ನೂ ಅರ್ಥವಾಗಿಲ್ಲ. ಹೀಗಾಗಿ ಸೋಲನ್ನು ಅವರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.

“ಮೋದಿ ಮಾನಸಿಕವಾಗಿ ಕುಗಿದ್ದಾರೆ ಎನ್ನುವುದು ಅವರು ದೇವರೊಂದಿಗೆ ನೇರವಾಗಿ ಮಾತನಾಡುತ್ತೇನೆ ಎಂದು ಹೇಳಿದಾಗಲೇ ನಮಗೆ ತಿಳಿದಿತ್ತು. ಪ್ರತಿಪಕ್ಷಗಳ ʼಇಂಡಿಯಾʼ ಒಕ್ಕೂಟಕ್ಕೆ ಮೋದಿ ಅವರ ಹಿನ್ನಡೆ ಮೊದಲೇ ಗೊತ್ತಾಗಿತ್ತುʼʼ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ನಾನು ಮೋದಿ ದ್ವೇಷಿಯಲ್ಲ

ಇದೇ ವೇಳೆ ವಾಷಿಂಗ್ಟನ್ ಡಿಸಿಯ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾನು ನಿಜವಾಗಿಯೂ ಮೋದಿ ಅವರನ್ನು ದ್ವೇಷಿಸುವುದಿಲ್ಲ. ಆದರೆ ಅವರ ದೃಷ್ಟಿಕೋನವನ್ನು ನಾನು ಒಪ್ಪುವುದಿಲ್ಲ. ನಮ್ಮದು ಸೈದ್ಧಾಂತಿಕ ವಿರೋದವೇ ಹೊರತು ವೈಯಕ್ತಿಕ ದ್ವೇಷವಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌ಎಸ್‌ ವಿರುದ್ಧವೂ ವಾಗ್ದಾಳಿ

“ಮೋದಿ ನನ್ನ ಶತ್ರು ಎಂದು ಭಾವಿಸುವುದಿಲ್ಲ. ಅವರಿಗೆ ಮತ್ತು ನನಗೆ ವಿಭಿನ್ನ ದೃಷ್ಟಿಕೋನವಿದೆʼʼ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಡಲ್ಲಾಸ್‌ನಲ್ಲಿ ಮಾತನಾಡಿ ಆರ್‌ಎಸ್‌ಎಸ್‌ ವಿರುದ್ಧ ಹಾರಿಹಾಯ್ದಿದ್ದಾರೆ. “ಮಹಿಳೆಯರನ್ನು ಒಂದು ನಿರ್ದಿಷ್ಟ ಪಾತ್ರಕ್ಕೆ ಸೀಮಿತಗೊಳಿಸಬೇಕು ಎಂದು ಬಿಜೆಪಿ / ಆರ್‌ಎಸ್‌ಎಸ್‌ ಪ್ರತಿಪಾದಿಸುತ್ತದೆ. ಮಹಿಳೆಯರು ಮನೆಯಲ್ಲಿಯೇ ಇರಬೇಕು, ಅಡುಗೆ ಮಾಡಬೇಕು, ಹೆಚ್ಚು ಮಾತನಾಡಬಾರದು ಎನ್ನುವುದು ಅವರ ಮನೋಭಾವ. ಮಹಿಳೆಯರು ಏನು ಮಾಡಲು ಬಯಸುತ್ತಾರೆಯೋ ಅದನ್ನು ಮಾಡಲು ಅವರಿಗೆ ಅವಕಾಶ ನೀಡಬೇಕು ಎಂದು ನಾವು ನಂಬುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಚುನಾವಣೆ ನಂತರ ಏನೋ ಬದಲಾಗಿದೆ. ಕೆಲವರು ನಮಗೆ ಇನ್ನು ಭಯವಿಲ್ಲ, ಭಯ ಈಗ ಹೋಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ತುಂಬಾ ಭಯವನ್ನು ಹರಡಿದ್ದರುʼʼ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi: ʻಇನ್ನು ಮುಂದೆ ಭಯ ಪಡಲ್ಲ..ʼ ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಮತ್ತೆ ಕಿಡಿ