ಕಠ್ಮಂಡು: ಕಠ್ಮಂಡುವಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹವು 380ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು, ವಸತಿ ಪ್ರದೇಶಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಠ್ಮಂಡುವಿನ 100 ಕ್ಕೂ ಹೆಚ್ಚು ಸ್ಥಳಗಳು ಜಲಾವೃತಗೊಂಡಿವೆ. ನೇಪಾಳ ಪೊಲೀಸ್, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಸೇನೆಯು 138 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ ಎಂದು ಮಹಾನಗರ ಪೊಲೀಸ್ ಕಚೇರಿಯ ವಕ್ತಾರ ಹೇಳಿ ದ್ದಾರೆ.
‘ಮನೋಹರ ನದಿ ತೀರದಲ್ಲಿರುವ ಮುಲ್ಪಾಣಿ ವಸಾಹತುಗಳಲ್ಲಿ, ಕಡಗರಿ, ಟೆಕು ಮತ್ತು ಬಲ್ಖು ಪ್ರದೇಶಗಳಲ್ಲಿ ಪಾರು ಗಾಣಿಕಾ ಕಾರ್ಯವನ್ನು ಕೈಗೊಳ್ಳಲಾಯಿತು’ ಎಂದು ರಾಥೋರ್ ಹೇಳಿದರು. ಕಠ್ಮಂಡುವಿನಲ್ಲಿ ನದಿ ತೀರದಲ್ಲಿರುವ ಬಹುತೇಕ ಜನವಸತಿಗಳು ಪ್ರವಾಹದಿಂದ ಜಲಾವೃತಗೊಂಡಿವೆ. ನಾಲ್ಕು ಗಂಟೆಗಳಲ್ಲಿ ಕಠ್ಮಂಡುವಿನಲ್ಲಿ 105 ಮಿಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದ ಒಟ್ಟು 382 ಮನೆಗಳು ಜಲಾವೃತಗೊಂಡಿವೆ ಎಂದು ಮಹಾ ನಗರ ಪೊಲೀಸ್ ಕಚೇರಿ ತಿಳಿಸಿದೆ. ಟ್ಯಾಂಕೇಶ್‌ವರ್, ಡಲ್ಲು, ಟೆಕು, ತಾಚಲ್, ಬಾಲ್ಖು, ನಯಾ ಬಸ್‌ಪಾರ್ಕ್, ಭೀಮಸೇನ್‌ಸ್ಥಾನ್, ಮಚ್ಚಾ ಪೋಖಾರಿ, ಚಬಹಿಲ್, ಜೋರ್ಪತಿ ಮತ್ತು ಕಲೋಪುಲ್ ಸೇರಿದಂತೆ ಹಲವು ಪ್ರದೇಶಗಳು ಪ್ರವಾಹದಿಂದ ತುಂಬಿವೆ ಎಂದು ಹೇಳಲಾಗಿದೆ.
ಒಖಲ್‌ದುಂಗಾ ಜಿಲ್ಲೆಯ ಬೇಟಿನಿ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ಏಳು ಜನರು ಗಾಯಗೊಂಡಿದ್ದಾರೆ. ಸಿಡಿಲು ಬಡಿದು ಒಂದು ಡಜನ್ ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.