Thursday, 12th December 2024

ಪ್ರಮಾಣ ವಚನ ಸ್ವೀಕರಿಸಿದ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಕೊಲಂಬೋ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಅವರು ಗುರುವಾರ ದೇಶದ ಮುಖ್ಯ ನ್ಯಾಯಾಧೀಶರಿಂದ ಪ್ರಮಾಣ ವಚನ ಸ್ವೀಕರಿಸಿದರು.

ವಿಕ್ರಮಸಿಂಘೆ ಅವರು 225 ಸದಸ್ಯರ ಸಂಸತ್ತಿನಲ್ಲಿ ಬುಧವಾರ ನಡೆದ ಮತ ಎಣಿಕೆಯಲ್ಲಿ 134 ಮತಗಳನ್ನು ಗಳಿಸಿದ್ದರು. ಅವರ ಹಿಂದಿನ ಗೊಟಬಯ ರಾಜಪಕ್ಸೆ ಅವರು ದೇಶದಿಂದ ಓಡಿಹೋದ ನಂತರ ಮತ್ತು ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನೂತನ ಅಧ್ಯಕ್ಷರನ್ನು ಬುಧವಾರ ಶಾಸಕರು ಶ್ರೀಲಂಕಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದರು. 225 ಸದಸ್ಯ ಬಲದ ಸದನದಲ್ಲಿ ವಿಕ್ರಮಸಿಂಘೆ 134 ಮತಗಳನ್ನು ಪಡೆದರೆ, ಅವರ ಸಮೀಪದ ಪ್ರತಿಸ್ಪರ್ಧಿ ಮತ್ತು ಭಿನ್ನಮತೀಯ ಆಡಳಿತ ಪಕ್ಷದ ನಾಯಕ ಡಲ್ಲಾಸ್ ಅಲಹಪ್ಪೆರುಮ 82 ಮತಗಳನ್ನು ಪಡೆದಿದ್ದರು. ಎಡಪಕ್ಷ ಜನತಾ ವಿಮುಕ್ತಿ ಪೆರಮುನ ನಾಯಕ ಅನುರ ಕುಮಾರ ಡಿಸಾನಾಯಕ ಅವರು ಸಂಸತ್ತಿನಲ್ಲಿ ಬಿಗಿ ಭದ್ರತೆಯ ನಡುವೆ ನಡೆದ ಮತದಾನದಲ್ಲಿ ಕೇವಲ ಮೂರು ಮತಗಳನ್ನು ಪಡೆದ್ದರು.

ರಾನಿಲ್ ವಿಕ್ರಮಸಿಂಘೆ ಅವರು ಪ್ರಜಾಸತ್ತಾತ್ಮಕ ಆಚರಣೆಗಳನ್ನು ಎತ್ತಿ ಹಿಡಿದಿದ್ದಕ್ಕಾಗಿ ಸಂಸತ್ತಿಗೆ ಧನ್ಯವಾದ ಅರ್ಪಿಸಿದರು ಮತ್ತು ಅಧ್ಯಕ್ಷೀಯ ಪ್ರತಿಸ್ಪರ್ಧಿಗಳು ಹಾಗೂ ಮಾಜಿ ಅಧ್ಯಕ್ಷರಾದ ಮಹಿಂದಾ ರಾಜಪಕ್ಸೆ ಮತ್ತು ಮೈತ್ರಿಪಾಲ ಸಿರಿಸೇನಾ ಅವರ ಬೆಂಬಲವನ್ನು ಕೋರಿದರು. ತಮಿಳು ನಾಯಕರನ್ನೂ ತನ್ನೊಂದಿಗೆ ಸೇರಿಕೊಳ್ಳುವಂತೆ ಕೇಳಿಕೊಂಡರು.