Saturday, 23rd November 2024

2036ರವರೆಗೂ ರಷ್ಯಾ ಅಧ್ಯಕ್ಷರಾಗಿ ಪುಟಿನ್: ಹೊಸ ಕಾನೂನಿಗೆ ಬಿತ್ತು ಅಂಕಿತ

ಮಾಸ್ಕೋ: ಇನ್ನೂ 15 ವರ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವಂತಹ ಕಾನೂನಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಈ ಮೂಲಕ ಪುಟಿನ್ 2036ರವರೆಗೂ ರಷ್ಯಾ ಅಧ್ಯಕ್ಷರಾಗಿ ಇರುವ ಸಾಧ್ಯತೆ ಇದೆ.

68 ವರ್ಷದ ಪುಟಿನ್, ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಅಧಿಕಾರದಲ್ಲಿದ್ದಾರೆ. ಸಂವಿಧಾನದ ಸುಧಾರಣೆಯ ಭಾಗವಾಗಿ ಕಳೆದ ವರ್ಷ ಅವರು ಬದಲಾವಣೆಯ ಪ್ರಸ್ತಾವನೆ ಇರಿಸಿದ್ದರು. 2020ರ ಜುಲೈ ತಿಂಗಳಲ್ಲಿ ನಡೆದ ಸಾರ್ವಜನಿಕ ಮತದಾನದಲ್ಲಿ ಬೆಂಬಲ ದೊರಕಿತ್ತು. ಕಳೆದ ತಿಂಗಳು ಶಾಸನವನ್ನು ರಷ್ಯಾ ಸಂಸತ್ತಿನ ಕೆಳ ಹಾಗೂ ಮೇಲ್ಮನೆಗಳಲ್ಲಿ ಅಂಗೀಕರಿಸಲಾಗಿತ್ತು.

ಪುಟಿನ್ ಸಹಿ ಹಾಕಿರುವ ಕಾನೂನಿನ ಪ್ರಕಾರ ಭವಿಷ್ಯದಲ್ಲಿ ಅಧ್ಯಕ್ಷರ ಅಧಿಕಾರವು ಎರಡು ಅವಧಿಗೆ ಸೀಮಿತವಾಗಿರುತ್ತದೆ. ಅಂದರೆ ಇದು ಅವರ ಈಗಿನ ಹಾಗೂ ಹಿಂದಿನ ಅಧಿಕಾರಗಳನ್ನು ಪರಿಗಣಿಸುವುದಿಲ್ಲ. ಯಾವುದೇ ವಿದೇಶಿ ಪೌರತ್ವ ಹೊಂದಿರುವ ವ್ಯಕ್ತಿ ರಷ್ಯಾ ಅಧ್ಯಕ್ಷರಾಗುವ ಅವಕಾಶ ಪಡೆದುಕೊಳ್ಳುವುದನ್ನು ಇದು ನಿರ್ಬಂಧಿಸುತ್ತದೆ. ಪುಟಿನ್ ಅವರ ಈ ಹೊಸ ಕಾನೂನಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಪುಟಿನ್ ಅವರು 20 ವರ್ಷಕ್ಕೂ ಹೆಚ್ಚು ಕಾಲದಿಂದ ರಷ್ಯಾವನ್ನು ಆಳಿದ್ದಾರೆ. ಸತತವಾಗಿ ನಾಲ್ಕು ವರ್ಷದ ಎರಡು ಅವಧಿಗಳನ್ನು ಪೂರೈಸಿದ್ದರು. 2008ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 2012ರಲ್ಲಿ ಅಧ್ಯಕ್ಷರ ಅವಧಿಯನ್ನು ಆರು ವರ್ಷಕ್ಕೆ ವಿಸ್ತರಿಸಿದ ಬಳಿಕ ಅಧ್ಯಕ್ಷ ಹುದ್ದೆಗೆ ಮರಳಿದ್ದರು. 2018ರಲ್ಲಿ ಮರಳಿ ಆಯ್ಕೆಯಾಗಿದ್ದರು. ಈಗಿನ ಅವರ ಅಧಿಕಾರಾವಧಿ 2024ಕ್ಕೆ ಅಂತ್ಯ ಗೊಳ್ಳಲಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily