Friday, 22nd November 2024

ಯುದ್ದ ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ: ಸೌದಿ ಪ್ರಿನ್ಸ್

ರಿಯಾದ್: ಪ್ಯಾಲೆಸ್ತೀನ್-ಇಸ್ರೇಲ್‌ ನಡುವಿನ ಯುದ್ಧದ ಕುರಿತು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಚರ್ಚಿಸಿದ್ದಾರೆ.

ಪ್ಯಾಲೆಸ್ತೀನ್ ವಿರುದ್ಧದ ಇಸ್ರೇಲಿನ ಯುದ್ಧ ಅಪರಾಧಗಳನ್ನು ಕೊನೆಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವನ್ನು ವ್ಯಕ್ತಪಡಿಸಿದ್ದಾರೆ ಎಂದು ಇರಾನ್‌ ಸರ್ಕಾರ ಮಾಧ್ಯಮ ವರದಿ ಮಾಡಿದೆ.

ಯುದ್ದವನ್ನು ತಡೆಯಲು ಎಲ್ಲಾ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ನಾಯಕರೊಂದಿಗೆ ನಾನು ಚರ್ಚೆ ನಡೆಸಿದ್ದೇನೆ. ಸಾಧ್ಯವಿರುವ ಎಲ್ಲ ಪ್ರಯತ್ನ ಗಳನ್ನು ನಾವು ಮಾಡುತ್ತಿದ್ದೇವೆ ಎಂಬುದಾಗಿ ರಾಜಕುಮಾರ ತಿಳಿಸಿದ್ದಾರೆ’ ಎಂದು ಸುದ್ದಿ ಸಂಸ್ಥೆ ಸ್ಪಾ ಹೇಳಿದೆ.

ಈ ಎರಡೂ ದೇಶಗಳ ನಾಯಕರ ನಡುವಿನ ಮಾತುಕತೆಯು ವಿಶ್ವದಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಇಸ್ರೇಲ್‌ನ ಯುದ್ಧ ಅಪರಾಧ ಗಳನ್ನು ಕೊನೆಗೊಳಿಸಲೇಬೇಕು ಎಂಬ ಸಂದೇಶವು ಬೇರೆಯದೇ ಗುಟ್ಟನ್ನು ಹೇಳುತ್ತಿದೆ. ಯಹೂದಿ ರಾಷ್ಟ್ರವಾದ ತಡೆಯಲು ಮುಸ್ಲಿಂ ರಾಷ್ಟ್ರಗಳು ಒಂದಾಗುತ್ತಿವೆಯೇ ಎಂಬ ಶಂಕೆಗಳು ಮೂಡಿವೆ.

ಗಾಜಾಪಟ್ಟಿಯ ಮೇಲೆ ವೈಮಾನಿಕ ದಾಳಿಗಳನ್ನು ಇಸ್ರೇಲ್‌ ಮುಂದುವರಿಸಿದೆ. ಖಾನ್ ಯೂನಿಸ್ ನಗರದಲ್ಲಿ ಒಂಬತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರು ಮೃತಪಟ್ಟಿದ್ದಾರೆ.

ಹಮಾಸ್ ವಶದಲ್ಲಿರುವ ಎಲ್ಲರನ್ನು ಬಿಡುಗಡೆ ಮಾಡುವವರೆಗೆ ಗಾಜಾಕ್ಕೆ ವಿದ್ಯುತ್ ಮತ್ತು ಇಂಧನ ಸೇರಿದಂತೆ ಯಾವುದೇ ಮೂಲಭೂತ ಸಂಪನ್ಮೂಲ ಗಳು ಅಥವಾ ಮಾನವೀಯ ನೆರವನ್ನು ನೀಡುವುದಿಲ್ಲವೆಂದು ಇಸ್ರೇಲಿ ಇಂಧನ ಸಚಿವರು ಹೇಳಿದ್ದಾರೆ.

‘ಇಸ್ರೇಲಿನಿಂದ ಅಪಹರಣಕ್ಕೊಳಗಾದವರನ್ನು ಮನೆಗೆ ಹಿಂದಿರುಗಿಸುವವರೆಗೆ ಯಾವುದೇ ವಿದ್ಯುತ್ ಸ್ವಿಚ್ ಆನ್ ಆಗುವುದಿಲ್ಲ. ನೀರಿನ ಟ್ಯಾಪ್ ತೆರೆಯುವುದಿಲ್ಲ. ಯಾವುದೇ ಇಂಧನಚಾಲಿತ ಟ್ರಕ್ ಸಂಚರಿಸುವುದಿಲ್ಲ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಇಸ್ರೇಲ್‌ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಹಮಾಸ್ ರಾಜಕೀಯ ಬ್ಯೂರೋ ಸದಸ್ಯ ಗಾಜಿ ಹಮದ್, ‘ನಾವು ಹೆದರುವುದಿಲ್ಲ. ನಾವು ಪ್ರಬಲ ಜನರು. ನಾವು ಮುಂದುವರೆಯುತ್ತೇವೆ. ಬಲವಾದ ನಿರ್ಧಾರಗಳನ್ನು ಮಾಡಿದ್ದೇವೆ.ನಾವು ಸಾಕಷ್ಟು ಹೋರಾಟಗಾರರನ್ನು ಹೊಂದಿದ್ದೇವೆ. ನಮ್ಮನ್ನು ಬೆಂಬಲಿಸಲು ಬಯಸುವ ಬಹಳಷ್ಟು ಜನರಿದ್ದಾರೆ’ ಎಂದು ಹೇಳಿದ್ದಾರೆ.