Friday, 20th September 2024

ಗ್ರೀಸ್ ಕರಾವಳಿಯಲ್ಲಿ ಮುಳುಗಿದ ಸರಕು ಸಾಗಣೆ ಹಡಗು: ನಾಲ್ವರು ಭಾರತೀಯರು ನಾಪತ್ತೆ

ಅಥೆನ್ಸ್: ಗ್ರೀಸ್ ದ್ವೀಪ ಲೆಸ್ಬೋಸ್‌ನಲ್ಲಿ ಸರಕು ಸಾಗಣೆ ಹಡಗು ಮುಳುಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 12 ಮಂದಿ ನಾಪತ್ತೆಯಾಗಿದ್ದಾರೆ.

ಹಡಗಿನಲ್ಲಿ ನಾಲ್ವರು ಭಾರತೀಯರು, ಇಬ್ಬರು ಸಿರಿಯಾ ಮತ್ತು ಎಂಟು ಮಂದಿ ಈಜಿಪ್ಟ್‌ನವರು ಸೇರಿ 14 ಮಂದಿ ಸಿಬ್ಬಂದಿ ಇದ್ದರು. ದುರಂತದಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರನ್ನು ರಕ್ಷಿಸಲಾಗಿದೆ. ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣದಿಂದಾಗಿ ಹಡಗು​ ಮುಳುಗಿದೆ ಎಂದು ತಿಳಿದು ಬಂದಿದೆ.

ರಾಪ್ಟರ್ ಹೆಸರಿನ ಹಡಗು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ 6 ಸಾವಿರ ಟನ್ ಉಪ್ಪು ಹೊತ್ತು ಟರ್ಕಿಯ ಇಸ್ತಾನ್‌ಬುಲ್‌ಗೆ ಸಂಚರಿಸುತ್ತಿತ್ತು. ಮಾರ್ಗ ಮಧ್ಯೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಗಮನಿಸಿದ ಸಿಬ್ಬಂದಿ ತಕ್ಷಣ ಸಮೀಪದ ಕೇಂದ್ರಕ್ಕೆ ಸಂಕಷ್ಟದ ಸೂಚನೆ ರವಾನಿಸಿದರು. ಸ್ವಲ್ಪ ಸಮಯದ ನಂತರ, ರಕ್ಷಣಾ ಕಾರ್ಯಕ್ಕೆ ತಂಡಗಳು ಆಗಮಿಸಿದ್ದವು. ಅಷ್ಟೊತ್ತಿಗಾಗಲೇ ಹಡಗು ಕಾಣೆಯಾಗಿತ್ತು.

ಎಂಟು ಹಡಗುಗಳು ಮತ್ತು ಗ್ರೀಸ್‌ನ ಒಂದು ಯುದ್ಧನೌಕೆ ಶೋಧ ಕಾರ್ಯ ನಡೆಸುತ್ತಿದೆ. ಒಬ್ಬ ಈಜಿಪ್ಟ್ ಪ್ರಜೆಯನ್ನು ರಕ್ಷಿಸಲಾಗಿದೆ. ಬಲವಾದ ಗಾಳಿ ಯೊಂದಿಗೆ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯ ಕಷ್ಟವಾಗಿದೆ ಎಂದು ರಕ್ಷಣಾ ತಂಡ ಹೇಳಿದೆ.

ಆಫ್ರಿಕಾ ದೇಶ ನೈಜೀರಿಯಾದಲ್ಲಿ ದೋಣಿ ಮುಳುಗಿ 17 ಜನರು ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿತ್ತು. ತಾರಾಬಾ ರಾಜ್ಯದ ಅರ್ಡೋ-ಕೋಲಾ ಜಿಲ್ಲೆ ಯಲ್ಲಿ ಘಟನೆ ನಡೆದಿದೆ. ನದಿಯಲ್ಲಿ ಪ್ರಯಾಣಿಸುತ್ತಿದ್ದಾಗ ದೋಣಿ ಪಲ್ಟಿಯಾಗಿತ್ತು.