Thursday, 19th September 2024

ವಿದ್ಯುತ್ ಅವ್ಯವಸ್ಥೆ ಮತ್ತಷ್ಟು ಹೆಚ್ಚಬಹುದು: ಎಚ್ಚರಿಕೆ ನೀಡಿದ ಚೀನಾದ ಲಿಯೋನಿಂಗ್

ಬೀಜಿಂಗ್: ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ ವಿದ್ಯುತ್ ಬಳಕೆ ನಿರ್ವಹಿಸಲು ಸರಕಾರ ಪ್ರಯತ್ನ ಮುಂದುವರಿಸಿರು ವಂತೆಯೇ, ಸೋಮವಾರದಿಂದ ವಿದ್ಯುತ್ ಅವ್ಯವಸ್ಥೆ ಮತ್ತಷ್ಟು ಹೆಚ್ಚಬಹುದು ಎಂದು ಚೀನಾದ ಲಿಯೋನಿಂಗ್ ಎಚ್ಚರಿಕೆ ನೀಡಿದೆ.

ವಿಶ್ವದಾದ್ಯಂತ ಕಲ್ಲಿದ್ದಲು ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಗೆ ತೊಡಕಾಗಿದೆ.

ಚೀನಾದ ಅರ್ಥವ್ಯವಸ್ಥೆಯಲ್ಲಿ 2ನೇ ಬೃಹತ್ ಪ್ರಾಂತ ಲಿಯೊನಿಂಗ್ ಸೋಮವಾರ 2ನೇ ಬಾರಿಗೆ ಭಾರೀ ವಿದ್ಯುತ್ ಕಡಿತದ ಎಚ್ಚರಿಕೆ ಸಂದೇಶ ರವಾನಿಸಿದೆ.

ಲಿಯೊನಿಂಗ್ ಪ್ರಾಂತ ಸೆಪ್ಟಂಬರ್ ಮಧ್ಯಭಾಗದಿಂದ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿದೆ. ಸೆಪ್ಟಂಬರ್ ತಿಂಗಳ ಅಂತಿಮ 3 ದಿನ ದೈನಂದಿನ ವಿದ್ಯುತ್ ಪೂರೈಕೆಗೆ ತೀವ್ರ ತೊಡಕಾಗಿದ್ದು, ಹಲವು ಮನೆಗಳು ವಿದ್ಯುತ್ ಕಡಿತದ ಸಮಸ್ಯೆ ಎದುರಿಸಿವೆ ಮತ್ತು ಕೈಗಾರಿಗಳು ತಮ್ಮ ಕೆಲಸ ಸ್ಥಗಿತಗೊಳಿಸುವ ಅನಿವಾರ್ಯತೆ ಸೃಷ್ಟಿ ಯಾಗಿತ್ತು. ಆದರೆ ಕೊರೋನ ಸಮಸ್ಯೆಯಿಂದ ಕಲ್ಲಿದ್ದಲು ಬೆಲೆ ಗಗನಕ್ಕೇರಿರುವುದು ಕೊರತೆಗೆ ಕಾರಣವಾಗಿದೆ.

ಚೀನಾದ 2 ಬೃಹತ್ ಕಲ್ಲಿದ್ದಲು ಗಣಿಯಲ್ಲಿ ಉತ್ಪಾದನೆಯನ್ನು ಶೇ.200 ಹೆಚ್ಚಿಸುವಂತೆ ಕಳೆದ ವಾರ ಸರಕಾರ ಆದೇಶಿಸಿದೆ.